ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಕ್ರಮ ಮರಳುಗಾರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

Rashmi Kasaragodu
Updated On : 18 Jun 2013, 12:13 pm

ಕ.ಪ್ರ.ವಾರ್ತೆ   ರಾಮನಗರ   ಜೂ.17
ಜಿಲ್ಲೆಯ ಅರ್ಕಾವತಿ, ಕಣ್ವ ನದಿ ಪಾತ್ರಗಳು ಸೇರಿದಂತೆ ಕಂದಾಯ ಭೂಮಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಗೃಹ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅಕ್ರಮ ಮರಳುಗಾರಿಕೆ ತಡೆಯುವುದು, ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಮರಳು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಲಿದೆ ಎಂದರು.  
ಡೆಂಘೀ ನಿಯಂತ್ರಣ: ಮಾರಕ ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆ ನಿಟ್ಟಿನಲ್ಲಿ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.  
 ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತಾಗಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ವ್ಯಾಪಕವಾಗಿ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಜಾರ್ಜ್ ಸೂಚಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಡೆಂಘೀ ಹಾವಳಿ ಇದೆ. ಅಂತೆಯೇ ರಾಮನಗರದಲ್ಲೂ ಡೆಂಘೀ ಪೀಡಿತರ ವರದಿ ಪಡೆದಿದ್ದು, ನಿಯಂತ್ರಣ ನಿಟ್ಟಿನಲ್ಲಿ ಸಮರೋಪಾದಿ ಕಾರ್ಯಕ್ರಮ ಕೈಗೊಳ್ಳುವುದು ಅಗತ್ಯ ಎಂದರು.
ನೀರು ಪೂರೈಸಿ: ಮುಂಗಾರು ಚುರುಕುಗೊಂಡಿದ್ದರೂ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವುದನ್ನು ಮುಂದುವರೆಸಬೇಕು ಎಂದು ಅವರು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತ, ಅನುದಾನ ಬಳಕೆ ಮತ್ತು ಕಾಮಗಾರಿಗಳ ಅನುಷ್ಠಾನದ ವಿವರಣೆ ಪಡೆದ ಸಚಿವರು ಸಮಾಧಾನ ವ್ಯಕ್ತಪಡಿಸಿದ್ದು ವಿಶೇಷ.
ತಾಲೂಕು ಭೇಟಿ: ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಾಗುವುದು. ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿ, ಪರಿಹಾರ ಕಂಡು ಹಿಡಿಯುವುದಾಗಿ ಜಾರ್ಜ್ ಹೇಳಿದರು.
ಜಿಲ್ಲೆಯಲ್ಲಿ ವಿಲೇವಾರಿ ಆಗದೆ ಉಳಿದಿರುವ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಅರ್ಜಿಗಳು ಮತ್ತು ಇತರೆ ಅರ್ಜಿಗಳ ಕಡತವನ್ನು ಜರೂರಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗಳಿಗೆ ಅಲೆಸಕೂಡದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಕಾಲ, ನರೇಗಾ, ವಸತಿ, ಕೃಷಿ, ಪಶು ಸಂಗೋಪನೆ, ಶಿಕ್ಷಣ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನದ ವಿವರವನ್ನು ಪಡೆದುಕೊಂಡರು. ಮುಂದಿನ ಸಭೆಗೆ ಸಮಗ್ರ ವರದಿ ಮಂಡಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಡಿ.ಕೆ.ಶಿವಕುಮಾರ್, ಎಚ್.ಸಿ. ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್, ಎಸ್ಪಿ ಅನುಪಮ್ ಅಗ್ರವಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


ಮಂತ್ರಿಗಿರಿ ಯಾರಿಗೂ ಶಾಶ್ವತವಲ್ಲ...
ಸಚಿವ ಸ್ಥಾನ, ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೂ ಶಾಶ್ವತವಲ್ಲ. ಮುಖ್ಯಮಂತ್ರಿ ಅವರು ತಮ್ಮ ವಿವೇಚನಗೆ ಅನುಗುಣವಾಗಿ ಯಾರನ್ನು ಯಾವಾಗ ಬೇಕಾದರೂ ಬದಲಿಸಬಹುದು.. ಹೌದು ಇದು ರಾಮನಗರ ಜಿಲ್ಲೆಯ 9ನೇ ಉಸ್ತುವಾರಿ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ.  ಉಸ್ತುವಾರಿ ಸಚಿವರಾಗಿ ನೀವೆಷ್ಟು ದಿನ ಇರುತ್ತೀರಿ ಎನ್ನುವ ಪತ್ರಕರ್ತರ ಪ್ರಶ್ನೆಗೆ  ರಾಮನಗರ ಜಿಲ್ಲೆಯ 9 ನೇ ಉಸ್ತುವಾರಿ  ಸಚಿವ ಕೆ.ಜೆ.ಜಾರ್ಜ್ ಅವರ ಪ್ರತಿಕ್ರಿಯೆ. ಜಿಲ್ಲೆಯಾಗಿ ಆರು ವರ್ಷ ತುಂಬುವಷ್ಟರಲ್ಲಿ 8 ಮಂದಿ ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ನೀವೆಷ್ಟು ದಿನ ಇರುತ್ತೀರಿ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.


ಅದೇ ರಾಗ ಅದೇ ಹಾಡು...
ಹಿಂದಿನ ಎಲ್ಲ ಉಸ್ತುವಾರಿ ಸಚಿವರಂತೆಯೇ ಕೆ.ಜೆ.ಜಾರ್ಜ್ ಕೂಡ ಇಲಾಖಾವಾರು ಬಿಡುಗಡೆಯಾದ ಅನುದಾನ, ಬಳಕೆ, ಕಾರ್ಯಕ್ರಮ ಇಲ್ಲವೇ ಕಾಮಗಾರಿಯ ಅನುಷ್ಠಾನದ ಪ್ರಗತಿ ನೋಟವನ್ನಷ್ಟೇ ತಿಳಿದುಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆ ಹೊರತಾಗಿ ಮಹತ್ವದ ಚರ್ಚೆ ಇಲ್ಲಿ ನಡೆದಿಲ್ಲ. ಅಕ್ರಮ ಗಣಿಗಾರಿಕೆ, ಅರಣ್ಯ ಗಣಿಗಾರಿಕೆಯ ಬಗ್ಗೆ ಸೊಲ್ಲೆತ್ತಿಲ್ಲ. ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ವಿಶೇಷ ಯೋಜನೆಗಳ ಪ್ರಸ್ತಾಪ ಇಲ್ಲವೇ ಇಲ್ಲ. ನೆನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ, ಎತ್ತಿನ ಹೊಳೆ ಯೋಜನೆ, ಬಿಡದಿ, ರಾಮನಗರ, ಬೈಪಾಸ್ ರಸ್ತೆ ನಿರ್ಮಾಣ ಕುರಿತು ಸಮಗ್ರ ವಿವರ ಪಡೆದ ಬಳಿಕವಷ್ಟೇ ಪ್ರತಿಕ್ರಿಯಿಸುವೆ ಎಂದು ನುಣುಚಿಕೊಂಡರು.


ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ...
ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿ.ಪಿ.ಯೋಗೇಶ್ವರ್ ಉಸ್ತುವಾರಿ ಸಚಿವರಾಗಿ ದರ್ಬಾರ್ ನಡೆಸಿದ್ದವರು. ಆದರೆ, ಈಗ ಅವರಿಬ್ಬರ ಹಣೆಬರಹ ಬದಲಾಗಿದೆ. ಕೇಂದ್ರ ಬಿಂದುವಾಗಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದ್ದ ಅವರಿಬ್ಬರೂ ಕೆ.ಜೆ.ಜಾರ್ಜ್ ಅಧ್ಯಕ್ಷತೆಯ ಸಭೆಯಲ್ಲಿ ಆಸುಪಾಸಿನಲ್ಲಿ ಕೂರುವಂತಾಗಿತ್ತು. ಹಿಂದೊಮ್ಮೆ ಯೋಗೇಶ್ವರ್ ಅಧ್ಯಕ್ಷತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ ನಡೆದಿತ್ತು. ರಾಮನಗರ ಜಿಲ್ಲೆ ಮಟ್ಟಿಗೆ ಅದೇ ಹೈ ವೋಲ್ಟೇಜ್ ಸಭೆಯಾಗಿತ್ತು. ಜಾರ್ಜ್ ಎಡ ಮತ್ತು ಬಲಕ್ಕೆ ಅವರಿಬ್ಬರೂ ತೆಪ್ಪಗಿದ್ದರು.



ಸಭೆಯ ಹೈಲೆಟ್ಸ್


ಟಿ ಸಾರ್ವಜನಿಕರನ್ನು ಕಚೇರಿಗೆ ಅಲೆಸುವ ಅಧಿಕಾರಿಗಳ ವಿರುದ್ಧ ಕ್ರಮ.
ಟಿ ಜೂನ್ ಒಳಗೆ ಎಲ್ಲಾ ಕ್ರಿಯಾ ಯೋಜನೆ ಪೂರ್ಣಗೊಳಿಸಿ.
ಟಿ ನಿಯಮಬಾಹಿರ ಬಡಾವಣೆಗಳ ನಿರ್ಮಾಣಕ್ಕೆ ಬ್ರೇಕ್ ಹಾಕಿ.
ಟಿ ಅರ್ಹ ಫಲಾನುಭವಿಗಳೆಲ್ಲರಿಗೂ ಸಾಮಾಜಿಕ ಭದ್ರತಾ ಸೌಲಭ್ಯ ಕಲ್ಪಿಸಿ.
ಟಿ ಜಿಲ್ಲೆಯಲ್ಲಿ 55 ಡೆಂಘೀ ಪ್ರಕರಣ ನಿರ್ಲಕ್ಷ್ಯ ಬೇಡ.
ಟಿ ಒಂದು ವಾರದಲ್ಲಿ ಅಕ್ರಮ ಗಣಿಗಾರಿಕೆಗೆ ಕೊನೆ ಹಾಡಿ.
ಟಿ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾದ ಅಧಿಕಾರಿಗಳಿಗೆ ಅಮಾನತು ಶಿಕ್ಷೆ.
ಟಿ ಅರಣ್ಯ ಪ್ರದೇಶ ನಿವಾಸಿಗಳನ್ನು ಒಕ್ಕಲೆಬ್ಬಿಸಕೂಡದು.
ಟಿ ಜು.1ರಿಂದ ಬಿಪಿಎಲ್‌ಗೆ ಕೆಜಿಗೆ ರು.1ರ ದರದಲ್ಲಿ ಅಕ್ಕಿ ವಿತರಣೆಗೆ ಸಜ್ಜಾಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement