ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ಸಿಗರ ಹಿತ ಕಡೆಗಣನೆ ಪ್ರಶ್ನೆಯೇ ಇಲ್ಲ

Rashmi Kasaragodu
Updated On : 18 Jun 2013, 12:13 pm

ರಾಮನಗರ: ಕಾಂಗ್ರೆಸಿಗರ ಹಿತ ಕಡೆಗಣನೆ ಪ್ರಶ್ನೆಯೇ ಇಲ್ಲ. ಇದಕ್ಕೆ ಈಚೆಗೆ ಚನ್ನಪಟ್ಟಣದಲ್ಲಿ ಖಾಸಗಿ ಬಸಸ್ನಿಲ್ದಾಣ ಕಾಮಗಾರಿಗೆ ಗುದ್ದಲಿ ಪೂಜೆ ಸಮಾರಂಭ ರದ್ದುಪಡಿಸಿದ್ದೇ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗಣಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಉಸ್ತುವಾರಿ ಹೊಣೆ ಹೊತ್ತ ಬಳಿಕ ಮೊದಲ ಬಾರಿಗೆ ಸೋಮವಾರ ರಾಮನಗರಕ್ಕೆ ಭೇಟಿ ನೀಡಿದ್ದ ಅವರು ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಂದ ಕರೆ ಬಂದ ಹತ್ತೇ ನಿಮಿಷದಲ್ಲಿ ಚನ್ನಪಟ್ಟಣ ಸಮಾರಂಭ ರದ್ದುಪಡಿಸಿದೆ ಎಂದರು.
ಈ ಜಿಲ್ಲೆಯ 4 ಕ್ಷೇತ್ರಗಳ ಪೈಕಿ 3 ಕಡೆ ಕಾಂಗ್ರೆಸ್ ಸೋಲು ಕಂಡಿರಬಹುದು. ಆದರೆ, ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಂದಿಲ್ಲ. ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿ ಜತೆಗೆ ಪಕ್ಷದ ಬಲವರ್ಧನೆಗೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ ಎಂದು ಅವರು ತಿಳಿಸಿದರು.
ಗೆಲುವೇ ನಮ್ಮ ಗುರಿ: ಮುಂಬರುವ ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದು.  ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಈಗಿನಿಂದಲೇ ಸಜ್ಜುಗೊಳ್ಳಬೇಕು. ಜನರ ಮಧ್ಯೆ ಇದ್ದು, ಪಕ್ಷದ ಗೆಲುವಿಗೆ ಪಣ ತೊಡಬೇಕು ಎಂದು ಜಾರ್ಜ್ ಕರೆ ನೀಡಿದರು. ರಾಮನಗರ ಜಿಲ್ಲೆ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ದೇಶ ಆಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಮಣಿಸಿದ ಇತಿಹಾಸ ನಮ್ಮ ಪಕ್ಷಕ್ಕಿದೆ. ಎದುರಾಳಿಯ ಬಗ್ಗೆ ಯಾವುದೇ ಭೀತಿ ಇಲ್ಲದೆ ಸಮರ್ಥ ಹೋರಾಟ ನಡೆಸಿ ಎಂದರು.
ಸಮಸ್ಯೆಗೆ ಸ್ಪಂದನೆ: ರಾಮನಗರ ಜಿಲ್ಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ತಮಗೆ ಸ್ಪಷ್ಟ ಮಾಹಿತಿ ಇಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಮ್ಮೊಂದಿಗೆ ನೇರ ಸಂಪರ್ಕದಲ್ಲಿದ್ದುಕೊಂಡು ಎಲ್ಲ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಹಾರ ಕಲ್ಪಿಸುವುದಾಗಿ ಅವರು ಹೇಳಿದರು.ಈ ಸಭೆಯಲ್ಲಿ ಹತ್ತಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಲಾಗಿದೆ. ಇವುಗಳಲ್ಲಿ ಸಾಧ್ಯವಾದಷ್ಟು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತ್ವರಿತವಾಗಿ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಣಾಳಿಕೆ ಅನುಷ್ಠಾನ: ಯುವಕರು, ಅನುಭವಿಗಳು ಮತ್ತು ಉತ್ಸಾಹಿ ನಾಯಕರಿಂದ ಕೂಡಿದ ಸಮತೋಲನ ಮಂತ್ರಿ ಮಂಡಲವು ಸಿದ್ದರಾಮಯ್ಯ ನೇತೃತ್ವದಲ್ಲಿ ರಚನೆಯಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಲಾದ ಪ್ರಣಾಳಿಕೆಯ ಎಲ್ಲ ಅಂಶಗಳನ್ನು ಸರ್ಕಾರ ಅನುಷ್‌ಠಾನಕ್ಕೆ ತರಲಿದೆ ಎಂದು ಜಾರ್ಜ್ ತಿಳಿಸಿದರು.
ಬಿಪಿಎಲಲ್ಕಾರ್ಡುದಾರರಿಗೆ ರು.1ಕ್ಕೆ 1ಕೆಜಿ ಅಕ್ಕಿ ಭರವಸೆ ಈಡೇರಿಸುವ ಘೋಷಣೆಯಾಗಿದೆ. ಹಾಲಿನ ಪ್ರೋತ್ಸಾಹ ಧನವನ್ನು ರು.4ಕ್ಕೆ ಹೆಚ್ಚಳ ಮಾಡಲಾಗಿದೆ. ಪರಿಶಿಷ್ಟರು, ಹಿಂದುಳಿದವರ ಸಾಲ ಮನ್ನಾ ಆಗಿದೆ. ಹೀಗೆ ಒಂದೊಂದೇ ಭರವಸೆಗಳ ಈಡೇರಿಕೆ ಖಂಡಿತ ಆಗಲಿದೆ ಎಂದರು.
ಮರಿದೇವರು ಮನವಿ: ಬೀಡಿ ಕಾರ್ಮಿಕರಿಗೆ ವಸತಿ ಯೋಜನೆ, ನಿವೇಶನ ರಹಿತ ನಗರ ವಾಸಿಗಳಿಗೆ ನಿವೇಶನ ಹಂಚಿಕೆ, ಎತ್ತಿನ ಹೊಳೆ ಯೋಜನೆ ಅನುಷ್ಠಾನದ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಮನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮರಿದೇವರು ಮನವಿ ಸಲ್ಲಿಸಿದರು.
ಅರ್ಕಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು. ಇದರಲ್ಲಿ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು.  
 ಕಂದಾಯ ಇಲಾಖೆಯಲ್ಲಿ ಗೋಲ್‌ಮಾಲ್ ನಡೆಸುತ್ತಿರುವ ಸಿಬ್ಬಂದಿಯನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.  ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ನಿಸಾರ್ ಅಹಮದ್ ಮಾತನಾಡಿದರು. ಎ.ಸಿ.ವೀರೇಗೌಡ, ವಿ.ಎಚ್.ರಾಜು, ಕೆ.ಶೇಷಾದ್ರಿ, ಇಕ್ಬಾಲ್ ಹುಸೇನ್ ಸೇರರಿದಂತೆ ಮತ್ತಿತರರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement