ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸೈಕಲ್ ತುಳಿಯೋರನ್ನು ಯಾವತ್ತಿಗೂ ನಂಬಬೇಡಿ'

Rashmi Kasaragodu
Updated On : 18 Jun 2013, 12:13 pm

ರಾಮನಗರ: ಸೈಕಲ್ ತುಳಿಯೋರನ್ನು ಯಾವತ್ತಿಗೂ ನಂಬಬೇಡಿ. ಕಾಂಗ್ರೆಸಿಗರಿಗೆ ಮಾತ್ರವೇ ಮನ್ನಣೆ ನೀಡಿ. ಹೀಗೆಂದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ರಾಜಕೀಯ ಕಡುವೈರಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ನೇರ ವಾಗ್ದಾಳಿಯೊಂದಿಗೆ ಉಸ್ತುವಾರಿ ಸಚಿವರಿಗೆ ಸಲಹೆಗಳನ್ನು ನೀಡಿದರು.
  ಕಾಂಗ್ರೆಸ್ ಪಕ್ಷಕ್ಕೆ ಯೋಗೇಶ್ವರ್ ಕೊಡುಗೆ ಏನೇನೂ ಇಲ್ಲ. ಆ ವ್ಯಕ್ತಿ ವೈಯಕ್ತಿಕ ಹಿತಾಸಕ್ತಿಯ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿದು, ಬಿಜೆಪಿಗೆ ಹೋಗಿದ್ದ ಅವರಿಗೆ ಈಗೇಕೆ ಬೇಕು ಕಾಂಗ್ರೆಸ್ ಎಂದು ಪ್ರಶ್ನಿಸಿದರು.   
ಹೆಣ ಹೋರೋದಕ್ಕಾಗಲೀ, ಪಲ್ಲಕ್ಕಿ ಹೊರುವುದಕ್ಕಾಗಲೀ ಕಾಂಗ್ರೆಸ್ಸಿನಲ್ಲೇ ಸಾಕಷ್ಟು ಕಾರ್ಯಕರ್ತರಿದ್ದಾರೆ. ಸೈಕಲ್ ತುಳಿಯುತ್ತಿರೋ ಮಂದಿಯ ಅಗತ್ಯವಿಲ್ಲ ಎಂದು ಯೋಗೇಶ್ವರ್ ಹೆಸರು ಪ್ರಸ್ತಾಪಿಸಿಯೇ ಶಿವಕುಮಾರ್ ಛೇಡಿಸಿದರು.
ಪರಾಜಿತರೇ ಶಾಸಕರು: ರಾಮನಗರ ಜಿಲ್ಲೆಯಲ್ಲಿ ಕನಕಪುರ ಹೊರತುಪಡಿಸಿ ಉಳಿದ 3 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ನಮ್ಮದೇ ಸರ್ಕಾರ ಅಧಿಕಾರದಲ್ಲಿ ಇರೋದ್ರಿಂದ ಆಯಾ ಕ್ಷೇತ್ರಗಳಲ್ಲಿ ಪರಾಜಿತರೇ ಶಾಸಕರಿದ್ದಂತೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.
ಹಿಂದೆಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಈ ಜಿಲ್ಲೆಯ ಮಟ್ಟಿಗೆ ಮಾತ್ರ ಜೆಡಿಎಸ್ ಪಕ್ಷ ಆಟ ನಡೆಯುತ್ತಿತ್ತು. ಈ ಬಾರಿ ಜೆಡಿಎಸ್, ಸೈಕಲ್ (ಸಮಾಜವಾದಿ ಪಕ್ಷ) ಆಟಾಟೋಪಕ್ಕೆ ಆಸ್ಪದ ಬೇಡ.  
 ಕಾಂಗ್ರೆಸ್ಸಿಗರಿಗೇ ಮನ್ನಣೆ ನೀಡಬೇಕು ಎಂದು ಅವರು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಅಂತ್ಯಹಾಡಬೇಕು.  
 ಅವರೆಲ್ಲರಿಗೂ ಸೂಕ್ತ ರಕ್ಷಣೆ ಒದಗಿಸಬೇಕು. ಆಡಳಿತದ ಪ್ರತಿ ಹಂತದಲ್ಲೂ ಅವರ ಮಾತಿಗೆ ಪುರಸ್ಕಾರ ಸಿಗುವಂತಾಗುವುದು ನಿಮ್ಮ ಧ್ಯೇಯವಾಗಲಿ ಎಂದು ಅವರು ಸಲಹೆಯಿತ್ತರು.
ಶಾಸಕರಾಗಿ ಮೊದಲ ಬಾರಿ ಪಕ್ಷದ ವೇದಿಕೆ ಹಂಚಿಕೆ...
ರಾಮನಗರ: ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಅಧಿವೇಶನ ಮುಗಿಯುವ ತನಕ ಶಾಸಕರಾಗಿ ಪ್ರಮಾಣ ವಚನವನ್ನೂ ಸ್ವೀಕರಿಸದಿದ್ದ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಈ ಅವಧಿ ಶಾಸಕರಾಗಿ ಇದೇ ಮೊದಲ ಬಾರಿ ಪಕ್ಷದ ವೇದಿಕೆ ಹಂಚಿಕೊಂಡಿದ್ದಾರೆ.
ಆಪ್ತಮಿತ್ರರೂ ಆದ ನೂತನ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚೊಚ್ಚಲ ಭೇಟಿ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಿವಕುಮಾರ್ ಪಾಲ್ಗೊಂಡು, ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ರಕ್ಷಣೆ ಕುರಿತು ಹಿತೋಪದೇಶ ನೀಡಿದರು.
ಸೋನಿಯಾ ಕೋರ್ಟ್‌ನಲ್ಲಿದೆ: ಸಭೆಯಲ್ಲಿ ಮಾತನಾಡಿದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಬೇಕು ಎಂದು ಉಸ್ತುವಾರಿ ಸಚಿವ ಜಾರ್ಜ್ ಅವರಿಗೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, ಮಿತ್ರ ಶಿವಕುಮಾರ್ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಅಪರಿಚಿತರಲ್ಲ. ಇವರಿಗೆ ಯಾವ ಕಾರಣಕ್ಕೆ ಸಚಿವ ಸ್ಥಾನ ಕೈತಪ್ಪಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ಒಳಿತಾಗುತ್ತದೆ ಎಂದರು.
ಕಾರ್ಯಕರ್ತರ ಮನವಿ ಬಗ್ಗೆ ಭಾಷಣದಲ್ಲಿ ಪ್ರತಿಕ್ರಿಯಿಸಿದ ಶಿವಕುಮಾರ್, ನನ್ನ ಕೇಸು ಇರೋದು ಜಾರ್ಜ್-ಸಿದ್ದರಾಮಯ್ಯ ಕೋರ್ಟ್‌ನಲ್ಲಿ ಇಲ್ಲ. ಅದಿರೋದು ಸೋನಿಯಾ ಗಾಂಧಿ-ರಾಹುಲ್ ಗಾಂಧಿ ಕೋರ್ಟ್‌ನಲ್ಲಿ. ಅವರು ನ್ಯಾಯದ ಪರ ತೀರ್ಪು ಕೊಡುತ್ತಾರೆನ್ನುವ ಭರವಸೆಯನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement