ಖಾಸಗಿ ವಿವಿಗಳಿಗೆ ಅನುಮತಿ: ಪುನರ್ ಪರಿಶೀಲನೆಗೆ ಆಗ್ರಹ
ಕ.ಪ್ರ. ವಾರ್ತೆ ರಾಮನಗರ ಜೂ.18
ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ತರಾತುರಿಯಾಗಿ ಸುಮಾರು 21 ಖಾಸಗಿ ವಿವಿ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ಪುನರ್ ಪರಿಶೀಲಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಬಿಜೆಪಿ ಸರ್ಕಾರವು ಕೊನೆ ಕ್ಷಣದಲ್ಲಿ ಯಾವುದೇ ಅರ್ಹತೆ ಹೊಂದಿಲ್ಲದ ಖಾಸಗಿ ವಿವಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಅನುಮತಿ ನೀಡಿರುವ ಖಾಸಗಿ ವಿವಿಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ, ಅರ್ಹತೆ ಹೊಂದಿರದ ವಿವಿಗಳ ಮಾನ್ಯತೆಯನ್ನು ರದ್ದುಪಡಿಸಬೇಕು.
ರಾಜ್ಯದಲ್ಲಿ ಖಾಸಗಿ ಶಾಲಾ ಕಾಲೇಜುಗಳ ಡೊನೆಷನ್ ಹಾವಳಿ ಮಿತಿಮೀರಿದೆ. ಶಿಕ್ಷಣದ ವ್ಯಾಪಾರೀಕರಣ ನಡೆಯುತ್ತಿದೆ. ಆದ್ದರಿಂದ ಸೂಕ್ತ ಕಾಯಿದೆ ತರುವ ಮೂಲಕ ದಂಧೆಯನ್ನು ನಿಯಂತ್ರಿಸಬೇಕು. ಎಲ್ಲಾ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಂ.ಟೆಕ್ ಮತ್ತು ಎಂಇ ಕೋರ್ಸ್ಗಳನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ವಿವಿಗಳ ಸ್ನಾತಕೋತ್ತರ ಕೇಂದ್ರಗಳನ್ನು ಪ್ರಾರಂಭಿಸಬೇಕು.
ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸರ್ಕಾರಿ ಉಪನ್ಯಾಸಕರು ನಡೆಸುತ್ತಿರುವ ಟ್ಯೂಷನ್ ದಂಧೆಗೆ ಕಡಿವಾಣ ಹಾಕಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಅನಧಿಕಣತ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ, ಮೇಲ್ದರ್ಜೆಗೇರಿಸಬೇಕು.
ವಿವಿಗಳಿಗೆ ಏಕರೂಪ ವೇಳಾಪಟ್ಟಿ ಜಾರಿಗೊಳಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಅತ್ಯಂತ ತುರ್ತಾಗಿ ಬಗೆಹರಿಸಬೇಕು.
ತಪ್ಪಿದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ರಾಜ್ಯವ್ಯಾಪಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪರಿಷತ್ನ ರಾಜ್ಯ ಸಹ ಕಾರ್ಯದರ್ಶಿ ಸುನಿಲ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.