ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆ

Rashmi Kasaragodu
Updated On : 19 Jun 2013, 12:29 pm

ಕ.ಪ್ರ.ವಾರ್ತೆ, ಮಾಗಡಿ, ಜೂ.18
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ತಾಲೂಕು ಕಚೇರಿ ಮುಂದೆ
ಸ್ಥಾಪಿಸಲು ತಾಲೂಕು ಆಡಳಿತ ಅನುಮತಿ ನೀಡುವಂತೆ ತಹಸೀಲ್ದಾರ್  ಡಾ.ಬಿ.ಆರ್. ಹರೀಶ್ ನಾಯಕ್   ಅವರಿಗೆ ತಿಳಿಸಲಾಗಿದೆ ಎಂದರು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಅವರು ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈಗಾಗಲೇ ಸುಂದರವಾದ ಡಾ.ಬಿ.ಆರ್. ಅಂಬೇಡ್ಕರ್  ಅವರ ಪ್ರತಿಮೆ ಸಿದ್ಧಗೊಳಿಸಲಾಗಿದ್ದು, ಆಡಳಿತ ಅನುಮತಿ ನೀಡಿದ ಕೂಡಲೆ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಕಳೆದ  ಒಂದೂವರೆ ವರ್ಷದಿಂದ ದಲಿತರ ಸಭೆ ಕರೆಯದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು  ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಅರ್ಹ ದಲಿತರಿಗೆ ಬಿಪಿಎಲ್ ಕಾರ್ಡ್‌ಗೆ ಬದಲಾಗಿ ಎಪಿಎಲ್ ಕಾರ್ಡ್ ನೀಡುವ ಮೂಲಕ ಅನ್ಯಾಯವೆಸಗಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ವಿತರಣೆ, ದರಪಟ್ಟಿ, ವೇಳಾಪಟ್ಟಿ, ರಜಾ ದಿನದ ಫಲಕ ಪ್ರಕಟಣೆಯಿಲ್ಲ, ನ್ಯಾಯಬೆಲೆ ಅಂಗಡಿಗಳಲ್ಲೇ ಅನ್ಯಾಯ ನಡೆಯುತ್ತಿದ್ದರೂ ಕಂಡು ಕಾಣದಂತೆ ಆಹಾರ ಇಲಾಖೆ ವರ್ತಿಸುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದರು.
ವಿದ್ಯುತ್ ಸಂಪರ್ಕ: ದಲಿತ ಕಾಲೋನಿಗಳಿಗೆ ಭಾಗ್ಯಜೋತಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇವುಗಳಿಗೆ ವಿದ್ಯುತ್ ಬಿಲ್ ನೀಡುತ್ತಿಲ್ಲ, ಆದರೂ ಪಡಿತರ ಕಾರ್ಡ್ ಪಡೆಯಬೇಕಾದರೆ ವಿದ್ಯುತ್ ಬಿಲ್ ಕೊಡಬೇಕು. ಇಲ್ಲವೆಂದರೆ ಕಾರ್ಡ್ ಪಡೆಯಲು ಸಾಧ್ಯವಾಗದು ಎಂದು ವಾಪಸು ಕಳುಸುತ್ತಿದ್ದಾರೆ. ತಾಲೂಕಿನ ಬಹುತೇಕ ಪಂಚಾಯ್ತಿಗಳಲ್ಲಿ ಕಾರ್ಡ್ ಮಾಡಿಸಲು ನೆಟ್‌ವರ್ಕ್ ಇರುವುದಿಲ್ಲ, ಇದರೂ ಸರ್ವರ್ ಸಮಸ್ಯೆ, ಇದರಿಂದಾಗಿ ದಲಿತರು ಪಡಿತರ ಕಾರ್ಡ್‌ನಿಂದ ವಂಚಿತರಾಗುತ್ತಿದ್ದಾರೆ.  ನೂರಾರು ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಬಗರ್  ಹುಕುಂ ಸಾಗುವಳಿ ಚೀಟಿ ಇದ್ದರೂ ಖಾತೆ ಮಾಡುತ್ತಿಲ್ಲ. ದಲಿತರಿಗೆ ಸ್ಮಶಾನ ಇಲ್ಲ, ದಲಿತರ  ಕಾಲೋನಿಗಳ ರಸ್ತೆ ಬದಿಯಲ್ಲಿ ತಿಪ್ಪೆಗಳಿದ್ದು, ಮನೆಯಲ್ಲಿ ನೆಮ್ಮದಿಯಿಂದ ವಾಸಿಸಲು ಆಗದೆ ದುರ್ವಾಸನೆ ಬೀರುತ್ತಿದೆ. ದಲಿತ ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ವಿದ್ಯಾರ್ಥಿ ವೇತನ ನೀಡಿಲ್ಲ,  ಹೀಗೆ ಹತ್ತಾರು ಸಮಸ್ಯೆಗಳನ್ನು ದಲಿತ ಮುಖಂಡರು ಸಭೆಯ ಮುಂದಿಟ್ಟರು.
ಸಮಸ್ಯೆ ಬಗೆಹರಿಸಿ: ಈ ಸಂಬಂಧ ಶಾಸಕರು  ಕೂಡಲೆ ಗಮನಹರಿಸಬೇಕು. 3 ತಿಂಗಳಿಗೊಮ್ಮೆ ದಲಿತರ ಸಭೆ ಕರೆಯಲು ಅಗತ್ಯ ಕ್ರಮ ವಹಿಸಬೇಕು. ಸಮಸ್ಯೆ ಪರಿಹರಿಸಿ, ಸಾಮಾಜಿಕ ನ್ಯಾಯ ಒದಗಿಸುವಂತೆ ಮುಖಂಡರು  ಒತ್ತಾಯಿಸಿದರು.
ಗೊಂದಲ ಬೇಡ: ಎಚ್.ಸಿ. ಬಾಲಕೃಷ್ಣ ಮಾತನಾಡಿ ಪಡಿತರ ವಿತರಣೆ ಗೊಂದಲ ಬೇಡ, ಅನ್ಯಾಯವಾಗಿದ್ದರೆ, ಮಾಹಿತಿ ನೀಡಿ ಸಂಬಂಧಪಟ್ಟವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇನೆ. ಅರ್ಹ ದಲಿತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ, ಬಗರ್ ಹುಕಂ ಸಾಗುವಳಿದಾರರಿಗೆ ತೊಂದರೆ ಕೊಡದಂತೆ ವಿಧಾನ ಸಭೆಯಲ್ಲಿ ಈಗಾಗಲೇ ತೀರ್ಮಾನವಾಗಿದೆ. ತೊಂದರೆ ಕೊಡದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸುತ್ತೇನೆ. ಸ್ಮಶಾನ ಸ್ಥಳಗುರುತಿಸಿ ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇನೆ. ಸೀಮೆ ಎಣ್ಣೆ ವಿತರಣೆಯಲ್ಲಿ ಏರುಪೇರಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಹಸೀಲ್ದಾರ್  ಅವರಿಗೆ ಸೂಚಿಸಿದ್ದೇನೆ. ದಲಿತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸದಾ ಬದ್ಧನಾಗಿದ್ದೇನೆ. ನಿಮ್ಮಲ್ಲರ ಸಹಕಾರ ಅಗತ್ಯವಿದೆ ಎಂದರು.
ಅಗತ್ಯ ಕ್ರಮ: ತಹಸೀಲ್ದಾರ್  ಡಾ.ಬಿ.ಆರ್. ಹರೀಶ್ ನಾಯಕ್ ಮಾತನಾಡಿ  ದಲಿತರ ಸಮಸ್ಯೆಗಳ ನಿವಾರಣೆಗೆ ಕೂಡಲೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ಸದಸ್ಯ ಎಂ.ಕೆ.ಧನಂಜಯ, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜಿ. ಕೃಷ್ಣ, ದಲಿತ ಮುಖಂಡರಾದ  ಗ್ರಾ.ಪಂ. ಸದಸ್ಯ ಬೆಂಕಿ ಮಹದೇವ್, ಕಲ್ಕೆರೆ ಶಿವಣ್ಣ, ಸಿ.ಜಯರಾಂ, ಕುದೂರು ಮಂಜೇಶ್, ಹಕ್ಕಿನಾಳು ವೆಂಕಟೇಶ್, ತೋ.ವಿ. ಗಿರೀಶ್, ಜೀವಿಕ ಗಂಗಹನುಮಯ್ಯ, ಬೆಳ್ಳಿಯಪ್ಪ, ಚಕ್ರಭಾವಿ ಭೈರಪ್ಪ,  ದೊಡ್ಡಿ ಲಕ್ಷ್ಮಣ್, ಗಂಗಾಭಿಕೆ ನರಸಿಂಹಯ್ಯ, ಮೂರ್ತಿನಾಯಕ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯೆ ಎಸ್.ಜಿ. ವನಜಾ, ತಾ.ಪಂ.ಇಓ ಕೆ.ಬಿ. ಆಕ್ಕೋಜಿ, ಜಿ.ಪಂ. ಎಂಜಿನಿಯರ್ ರವಿ ಎಸ್. ಸೂರಾನ್, ಬಿಇಓ ರಂಗಸ್ವಾಮಿ, ಡಿ.ರಾಜಶೇಖರ್, ಪಿಎಸ್‌ಐ ಧರ್ಮೇಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇತರೆ ದಲಿತ ಮುಖಂಡರು ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement