ಚಿಕೂನ್ ಗುನ್ಯಾ, ಡೆಂಘೀಗೆ ಸೂಕ್ತ ಚಿಕಿತ್ಸೆ
ನೆಲಮಂಗಲ: ತಾಲೂಕಿನಲ್ಲಿ ಡೆಂಘೀ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ನರಸಿಂಹಯ್ಯ ತಿಳಿಸಿದ್ದಾರೆ. ಅವರು ಮಂಗಳವಾರ ತಾಲೂಕಿನ ಪಾಪಭೋವಿಪಾಳ್ಯಕ್ಕೆ ಭೇಟಿ ನೀಡಿ ಆ ಗ್ರಾಮದಲ್ಲಿ ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದು 12 ಜನ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾತನಾಡುತ್ತಾ ತಾಲೂಕಿನಲ್ಲಿ ಆರೋಗ್ಯ ಶಿಕ್ಷಣ ಸರ್ವೆ ಮಾಡಿಸಲಾಗಿದೆ. ತಾಲೂಕಿನಲ್ಲಿ ಪಾಪಭೋವಿಪಾಳ್ಯ, ಕೆಂಪಲಿಂಗನಹಳ್ಳಿ, ನರಸಾಪುರ, ಬಸವನಪಾಳ್ಯ, ಮೈಲನಹಳ್ಳಿ, ಬಾಪೂಜಿನಗರ ಗ್ರಾಮಗಳಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಘೀ ಜ್ವರದ ಪ್ರಕರಣಗಳು ದಾಖಲಾಗಿದೆ. ಈ ಗ್ರಾಮಗಳಲ್ಲಿ ವೈದ್ಯರು ಜ್ವರದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆ ನೀಡುವುದರಿಂದ ಎಲ್ಲ ರೋಗಿಗಳು ಆರೋಗ್ಯವಾಗಿದ್ದಾರೆ. ತಾಲೂಕಿನಲ್ಲಿ ಡೆಂಘೀ ಮತ್ತು ಚಿಕೂನ್ ಗುನ್ಯಾ ಜ್ವರಕ್ಕೆ ಸಂಬಂದಪಟ್ಟಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗುತ್ತದೆ ಎಂದರು. ಈ ಜ್ವರದಿಂದ ಬಳಲುತ್ತಿರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತೇವೆ. ಸಾರ್ವಜನಿಕರು ಈ ಜ್ವರದ ಬಗ್ಗೆ ಯಾರು ಆತಂಕ ಭಯ ಪಡಬಾರದೆಂದು ಮನವಿ ಮಾಡಿದ್ದಾರೆ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಹಾಗೂ ಗ್ರಾಮಸ್ಥರು ಇದ್ದರು.