ಜನ ಸಾಮಾನ್ಯರಿಗೆ ಸ್ಪಂದಿಸಿ: ಶಾಸಕ ಶಿವಣ್ಣ ತಾಕೀತು
ಆನೇಕಲ್: ಅಧಿಕಾರಿ ವರ್ಗದವರು ಅಧೀನ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಆಡಳಿತ ನೀಡಬೇಕೆಂದು ಶಾಸಕ ಬಿ. ಶಿವಣ್ಣ ಹೇಳಿದ್ದಾರೆ.
ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಮಾಹಿತಿ ಸಂಗ್ರಹ ಹಾಗೂ ಅನುಷ್ಠಾನ ಕುರಿತ ಚೊಚ್ಚಲ ಸಭೆಯಲ್ಲಿ ಮಾತನಾಡಿ ಜನ ಸಾಮಾನ್ಯರು ಹೊಸದನ್ನು ಬಯಸಿ ನೂತನ ಸರ್ಕಾರ ಹಾಗೂ ಕ್ಷೇತ್ರಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.
5000 ಹಕ್ಕು ಪತ್ರ ನೀಡಿಕೆ: ತಾಲೂಕಿನಲ್ಲಿ ಕಳೆದ 10 ವರ್ಷಗಳಿಂದ ಬಡ ಬಗ್ಗರಿಗೆ ನಿವೇಶನಗಳ ಹಕ್ಕು ಪತ್ರ ನೀಡಲಿಲ್ಲ. ಕಂದಾಯ ಹಾಗೂ ತಾಪಂ ಅಧಿಕಾರಿಗಳು ಜೂನ್ ಅಂತ್ಯದಲ್ಲಿ ಕನಿಷ್ಠ 5000 ಹಕ್ಕು ಪತ್ರಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದರು.
ಪಡಿತರ ಚೀಟಿ : ತಾಲೂಕಿನಲ್ಲಿ ಬಡ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರು, ಹಾಗೂ ದಿನಗೂಲಿ ನೌಕರರು ಸಹಸ್ರ ಸಂಖ್ಯೆಯಲ್ಲಿದ್ದು ಅವರನ್ನು ಪ್ರಾಮಾಣಿಕವಾಗಿ ಗುರುತಿಸಿ ಪಡಿತರ ಚೀಟಿ ನೀಡುವುದರ ಜೊತೆಗೆ ಜುಲೈ ಆರಂಭದಲ್ಲಿ ಕೇಂದ್ರ ಸರ್ಕಾರದಿಂದ ಬರುವ ಪಡಿತರವನ್ನು ಸಮರ್ಪಕವಾಗಿ ನೀಡಬೇಕೆಂದರು.
ಸರ್ಕಾರದ ಯೋಜನೆಯನ್ನು ಜಾರಿ ಮಾಡಲು ವಿಫಲರಾದ ಯಾವುದೇ ಅಧಿಕಾರಿಯ ಮೇಲೆ ನಿರ್ದಾರ್ಕ್ಷಿಣ್ಯ ಕ್ರಮ ಜರುಗಿಸುವುದಾಗಿ ಹೇಳಿದರು.
ಕಂದಾಯ ಇಲಾಖೆ: ರೈತರಿಗೆ ಪಹಣಿ, ಮ್ಯುಟೇಶನ್, ಖಾತೆ ವರ್ಗಾವಣೆಯಂತಹ ದಿನ ನಿತ್ಯದ ಕೆಲಸಗಳಿದ್ದು ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ಇರುವುದು ಗಮನಕ್ಕೆ ಬಂದಿದೆ.
ಈ ಕೂಡಲೇ ನ್ಯೂನತೆಯನ್ನು ಸರಿಪಡಿಸಿ ಸಂಬಂಧಿಸಿದ ಅಧಿಕಾರಿಯ ಮೇಲೆ ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ತಿಳಿಸಿದರು.