ನೈರ್ಮಲ್ಯಕ್ಕೆ ಒತ್ತು ನೀಡಿಲ್ಲ, ಆತಂಕ ಮುಗಿದಿಲ್ಲ
ಕ.ಪ್ರ.ವಾರ್ತೆ ರಾಮನಗರ ಜೂ.19
ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗದ ಹಾವಳಿ ಹೆಚ್ಚಿದ್ದರೂ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಆಡಳಿತಗಳು ಉಭಯ ನಗರಗಳ ನೈರ್ಮಲ್ಯಕ್ಕೆ ಒತ್ತು ನೀಡಿಲ್ಲ. ಉಭಯ ನಗರಗಳಲ್ಲಿ ಚರಂಡಿ, ಕಾಲುವೆಗಳ ತ್ಯಾಜ್ಯವನ್ನು ತೆಗೆದು ರಸ್ತೆಗೆ ಸರಿಸುವ ಮೂಲಕ ಅವಾಂತರ ತಂದೊಡ್ಡಲಾಗಿದೆ.
ರಾಮನಗರ ನಗರಸಭೆ ಆಡಳಿತದ್ದು ಕುಂಭಕರ್ಣನನ್ನೂ ಮೀರಿಸುವಂತಹ ನಿದ್ರಾವಸ್ಥೆಯಾಗಿದೆ. ಇಲ್ಲಿ ಕಸ ವಿಲೇವಾರಿಯ ಕರ್ಮಕಾಂಡ ಜಗಜ್ಜಾಹೀರವಾಗಿದೆ. ಕಸ ವಿಲೇವಾರಿ ವಿಷಯದಲ್ಲಿ ಕೊಂಚ ವಾಸಿ ಎನ್ನಬಹುದಾದ ಚನ್ನಪಟ್ಟಣ ನಗರಸಭೆಯು ಅನೈರ್ಮಲ್ಯದ ವಿಷಯದಲ್ಲಿ ರಾಮನಗರವನ್ನೂ ಮೀರಿಸಿದೆ.
ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆಯುತ್ತಿರುವ ನಡುವೆಯೇ ಉಭಯ ನಗರಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಯೋಜನಾ ಬದ್ಧ ಕಾರ್ಯಕ್ರಮಗಳ ಜಾರಿ ಇಲ್ಲದ ಜತೆಗೆ ಜನಪ್ರತಿನಿಧಿಗಳು, ಅಧಿಕಾರ ಶಾಹಿಯ ಅಸಡ್ಡೆಯಿಂದ ನಾಗರಿಕರ ಬದುಕು ಇಲ್ಲಿ ನರಕಸದಣಶವಾಗಿದೆ.
ಚರಂಡಿ ಅವಾಂತರ: ಒಂದು ಕಾಲಕ್ಕೆ ರಾಮನಗರದ ಕುಡಿಯುವ ನೀರು ಮತ್ತು ಅಚ್ಚುಕಟ್ಟು ಪ್ರದೇಶದ ಬೇಸಾಯಕ್ಕೆ ವರವಾಗಿದ್ದ ಅರ್ಕಾವತಿ ನದಿ ಈಗ ಶಾಪವಾಗಿ ಪರಿಣಮಿಸಿದೆ. ಈ ನಗರದ ಹಣದಯ ಭಾಗದಲ್ಲಿ ಸುಮಾರು 2.5 ಕಿ.ಮೀ. ದೂರ ಹಾದು ಹೋಗಿರುವ ನದಿಯಲ್ಲಿ ಈಗ ಗಿಡಗಂಟಿ, ಕೊಳಚೆ ನೀರಲ್ಲದೆ ಮತ್ತಿನ್ನೇನೂ ಇಲ್ಲ. ಇಲ್ಲಿರುವ ವಿಷ ಜಂತುಗಳು, ಉತ್ಪತ್ತಿಯಾಗುವ ಸೊಳ್ಳೆಗಳಿಂದ ರಾಮನಗರದ ಜನತೆಗೆ ನೆಮ್ಮದಿ ಭಂಗವಾಗುತ್ತಿದೆ. ಒಳ ಚರಂಡಿ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿಲ್ಲ. ರಸ್ತೆ ಇಕ್ಕೆಲಗಳ ಚರಂಡಿಗಳಲ್ಲಿ ತುಂಬಿದ ತ್ಯಾಜ್ಯ, ಹೂಳನ್ನು ತೆಗೆದು ರಸ್ತೆಗೆ ಹಾಕುವ ಕೆಲಸಕ್ಕೆ ಈ ನಗರದಲ್ಲಿ ಕೊನೆಯೇ ಇಲ್ಲದಂತಾಗಿರುವುದು ಶೋಚನೀಯ ಸಂಗತಿ.
ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಿರುವ ಬಡಾವಣೆಗಳಲ್ಲಿ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿರುತ್ತದೆ. ಈ ಘಟಕಗಳ ತ್ಯಾಜ್ಯವಲ್ಲದೆ ವಿವಿಧೆಡೆ ಶೌಚಾಲಯದಿಂದ ಹೊರ ಬರುವ ಮಲ, ಮೂತ್ರವನ್ನು ನೇರವಾಗಿ ಚರಂಡಿ ಬಿಡಲಾಗುತ್ತಿದೆ. ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ.
ಕಾಲುವೆ ಮಣ್ಣು ರಸ್ತೆಗೆ: ಬೆಳವಣಿಗೆ ವಿಷಯದಲ್ಲಿ ರಾಮನಗರವನ್ನೂ ಮೀರಿಸಿರುವ ಚನ್ನಪಟ್ಟಣದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಚನ್ನಪಟ್ಟಣದ ರಸ್ತೆ, ಚರಂಡಿ ವ್ಯವಸ್ಥೆಯು ಕುಗ್ರಾಮಗಳನ್ನೂ ನಾಚಿಸುವ ಮಟ್ಟಕ್ಕಿದೆ. ಈ ಪಟ್ಟಣಕ್ಕೆ ಮಂಗಳವಾರಪೇಟೆ ಕಡೆಯಿಂದ ಹರಿದು ಬರುವ ಕಾಲುವೆ, ಬೆಸ್ಕಾಂ ಕಚೇರಿ ಹಿಂಭಾಗ ಕೊಳಚೆ ನೀರಿನಿಂದ ತುಂಬಿದ ಕೆರೆಯೇ ಮಾರಕವಾಗಿದೆ.
ಸದರಿ ಕಾಲುವೆಯಲ್ಲಿ ವರ್ಷಾನುಗಟ್ಟಲೆಯಿಂದ ಹೂಳು ತುಂಬಿಕೊಂಡು, ಜೊಂಡು ಬೆಳೆದು ನಿಂತಿದೆ. ಒಂದಷ್ಟು ದೂರಕ್ಕೆ ಸೀಮಿತವಾಗಿ ಕಾಲುವೆಯ ಹೂಳು, ಘನ ತ್ಯಾಜ್ಯ, ಜೊಂಡು ತೆಗೆದು ರಸ್ತೆಗೆ ಹಾಕಲಾಗಿತ್ತು. ಅಪಾಯಕಾರಿ ರಸ್ತೆಯಲ್ಲಿ ಅರ್ಧ ಭಾಗಕ್ಕೆ ಚಾಚಿದ್ದ ತ್ಯಾಜ್ಯವನ್ನು ಹತ್ತಾರು ದಿನ ಹಾಗೇ ಬಿಟ್ಟು ಸಂಚಾರಕ್ಕೆ ಸಂಚಕಾರ ತಂದೊಡ್ಡಲಾಗಿತ್ತು. ಚನ್ನಪಟ್ಟಣದಲ್ಲಿ ರಸ್ತೆಗಳು ಅದ್ವಾನಗೊಂಡಿರುವ ಪರಿಣಾಮದಿಂದ ಎಷ್ಟೋ ಚರಂಡಿಗಳು ಮುಚ್ಚಿ ಹೋಗಿವೆ. ಬಹುತೇಕ ಕಡೆ ಕೊಳಚೆ ನೀರು ಚರಂಡಿ ಬದಲು ರಸ್ತೆಯಲ್ಲೇ ಹರಿಯುತ್ತಿದೆ. ನೂತನ ಬಡಾವಣೆಗಳಲ್ಲಂತೂ ರಸ್ತೆ, ಚರಂಡಿ ವ್ಯವಸ್ಥೆಯೇ ಇಲ್ಲ. ಇಂತಹ ಅವೈಜ್ಞಾನಿಕ ಬಡಾವಣೆಗಳ ನಿರ್ಮಾಣಕ್ಕೆ ಕಾರಣವಾದ ರಾ-ಚ ಪ್ರಾಧಿಕಾರವೂ ಮಾಮೂಲು ಪಡೆದು ತೆಪ್ಪಗಿದೆ.
ಶುದ್ಧೀಕರಣ ಮಾತೇ ಇಲ್ಲ: ಚನ್ನಪಟ್ಟಣದ ಬೆಸ್ಕಾಂ ಕಚೇರಿ ಹಿಂಭಾಗದಲ್ಲಿ ಕೊಳಚೆ ನೀರಿನಿಂದ ತುಂಬಿರುವ ಕೆರೆಯ ನೀರನ್ನು ಶುದ್ಧೀಕರಿಸುವ ವ್ಯವಸ್ಥೆಯೇ ಆಗಿಲ್ಲ. ದಶಕಗಳೇ ಕಳೆದರೂ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಗಬ್ಬು ವಾಸನೆ ಕುಡಿಯುವುದು ತಪ್ಪಿಲ್ಲ. ಈ ಕೆರೆಯಲ್ಲಿ ರೋಗ ರುಜಿನ ಹರಡುವ ಸೊಳ್ಳೆಗಳ ಉತ್ಪಾದನೆ ಹೇರಳವಾಗಿದೆ. ರಾಜ್ಯದ ಸಾಕಷ್ಟು ನಗರ, ಪಟ್ಟಣಗಳಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆ ಇದೆ. ಆದರೆ, ಚನ್ನಪಟ್ಟಣದಲ್ಲಿ ಇಲ್ಲಿವರೆಗೆ ಅಂತಹ ಪ್ರಯತ್ನಕ್ಕೆ ಮುಂದಾಗಿಲ್ಲ. ಕೆರೆಯಿಂದ ಆಚೆಗೆ ಹೋಗುವ ನೀರನ್ನು ಬಳಸಿಕೊಂಡು ಅಪ್ಪಗೆರೆ ರಸ್ತೆಯ ಇಕ್ಕೆಲಗಳ ಸಾಕಷ್ಟು ಪ್ರದೇಶದಲ್ಲಿ ಬೇಸಾಯ ಮಾಡಲಾಗುತ್ತಿದ್ದು, ತ್ಯಾಜ್ಯವನ್ನು ಮತ್ತಷ್ಟು ಕಡೆ ವಿಸ್ತರಿಸುವ ಕೆಲಸ ಸಾಗಿದೆ.
ಕ್ರಮಕ್ಕೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಆದೇಶ
ರಾಮನಗರದ ಕಸವನ್ನು ನಗರದ ಆಸುಪಾಸಿನಲ್ಲೇ ವಿಲೇವಾರಿ ಮಾಡಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿರುವ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅವರು ಗುತ್ತಿಗೆದಾರನನ್ನು ತಕ್ಷಣವೇ ಬದಲಿಸಿ, ಆ ಭಾಗದ ಹೆಲ್ತ್ ಇನ್ಸ್ ಪೆಕ್ಟರ್ಗಳಿಗೆ ನೊಟೀಸ್ ಜಾರಿಗೊಳಿಸುವಂತೆ ನಗರಸಭೆ ಆಯುಕ್ತರಿಗೆ ಆದೇಶಿಸಿದ್ದಾರೆ.
ನಗರಸಭೆಯಿಂದ ಕಸ ವಿಲೇವಾರಿಗೆ ಕಳ್ಳ ಮಾರ್ಗ ತಲೆಬರಹದಡಿ ಕನ್ನಡಪ್ರಭದ ಜೂ.19ರ ಸಂಚಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಶ್ರೀರಾಮರೆಡ್ಡಿ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲಿಸಿದ್ದು, ಕ್ರಮ ಜಾರಿಯ ಆದೇಶ ನೀಡಿದ್ದಾರೆ.
ನಗರದ ಕಸವನ್ನು ತಿಂಗಳಾನುಗಟ್ಟಲೆಯಿಂದ ಹೊರ ವಲಯದ ಕೆರೆ, ಕಟ್ಟೆ, ಬೆಟ್ಟದ ತಪ್ಪಲಲ್ಲಿ ವಿಲೇವಾರಿ ಮಾಡುವ ಮೂಲಕ ಪರಿಸರ ಮಾಲಿನ್ಯ ಉಂಟು ಮಾಡಲಾಗಿದೆ. ಅದರಿಂದ ಬರುತ್ತಿರುವ ಗಬ್ಬು ವಾಸನೆ ತಪ್ಪಿಸಲು ಸೂಕ್ತ ಸಲೂಷನ್ ಸಿಂಪಡಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜೆಸಿಬಿ ಮೂಲಕ ವಿಲೇವಾರಿ ಮಾಡಿರುವ ಕಸದ ಮೇಲೆ ಮಣ್ಣು ಹಾಕಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಗುತ್ತಿಗೆದಾರನ ಬಿಲ್ನಲ್ಲೇ ಕಟಾಯಿಸಬೇಕು. ಆತನನ್ನು ಬದಲಿಸುವುದು ಮಾತ್ರವಲ್ಲದೆ ಲೈಸನ್ಸ್ ರದ್ದುಪಡಿಸುವ ನಿಟ್ಟಿನಲ್ಲೂ ಮುಂದಾಗಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಕಸ ವಿಲೇವಾರಿಗೆ ಕಣ್ವ ಬಳಿ 40 ಎಕರೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಉಭಯ ನಗರಸಭೆಗಳ ವ್ಯಾಪ್ತಿಯ ಕಸವನ್ನು ಅಲ್ಲೇ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಸಂಸ್ಥೆಯ ಉನ್ನತ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕಾಗುತ್ತದೆ ಎಂದು ಶ್ರೀರಾಮರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಮತ್ತೀಕೆರೆ ಜಯರಾಮ್