ಶೇ.50ಕ್ಕೂ ಹೆಚ್ಚು ಪಶು ವೈದ್ಯ, ಸಿಬ್ಬಂದಿ ಹುದ್ದೆ ಖಾಲಿ
ಮಾಗಡಿ: ತಾಲೂಕಿನ ಪಶು ಸಂಗೋಪನಾ ಇಲಾಖೆಯಲ್ಲಿ ಶೇ.50ಕ್ಕೂ ಹೆಚ್ಚು ಪಶು ವೈದ್ಯರ, ಸಿಬ್ಬಂದಿಗಳ ಹುದ್ದೆ ಖಾಲಿಯಿದ್ದು, ವೈದ್ಯರ, ಸಿಬ್ಬಂದಿಗಳ ಕೊರತೆಯಿಂದಾಗಿ ಸಕಾಲಕ್ಕೆ ಸೇವೆ ದೊರಕದೆ ಹೈನುಗಾರಿಕೆಗೆ ತೀವ್ರ ತೊಂದರೆ ಆಗಿದೆ.
ಮಾಗಡಿ ಪಟ್ಟಣದ ಪಶುಸಂಗೋಪನಾ ಕೇಂದ್ರ ಸ್ಥಾನದ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರೊಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿರುವ ಏಳು ಪಶು ಚಿಕಿತ್ಸಾಲಯ ಕೇಂದ್ರಗಳಿಗೆ ಪಶು ವೈದ್ಯರು ಜತೆಗೆ ಸಿಬ್ಬಂದಿಗಳು ಇಲ್ಲದೆ ಪಶುಗಳಿಗೆ ಸಕಾಲಕ್ಕೆ ಸೇವೆ ದೊರಕುತ್ತಿಲ್ಲ. ಜತೆಗೆ ಬಹುತೇಕ ಪಶು ಕೇಂದ್ರಗಳು ಇದ್ದರೂ ಇಲ್ಲದಂತಾಗಿದೆ.
ಶಾಸಕರ ಹುಟ್ಟೂರಲ್ಲೂ: ಮಾಗಡಿ ಪಶು ಆಸ್ಪತ್ರೆ, ಮಣಿಗನಹಳ್ಳಿ, ತಿಪ್ಪಸಂದ್ರ, ಮಾಡಬಾಳ್, ಮೋಟಗಾನಹಳ್ಳಿ, ಹುಳ್ಳೇನಹಳ್ಳಿ ಸೇರಿದಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟೂರು ಹುಲೀಕಟ್ಟೆಯಲ್ಲೂ ಪಶು ವೈದ್ಯರಿಲ್ಲ.
ತಾಲೂಕಿನಲ್ಲಿ ಸುಮಾರು 16 ಪಶು ವೈದ್ಯರ ಹುದ್ದೆಗಳಿದ್ದು, 9 ಹುದ್ದೆಗಳು ಖಾಲಿಯಿವೆ. ಸುಮಾರು 25 ಡಿ. ಗುಂಪು ಹುದ್ದೆ, 4 ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರ ಹುದ್ದೆಗಳ ಕೊರತೆ ಎದುರಿಸುತ್ತಿದೆ.
ತಾಲೂಕಿನಲ್ಲಿ ಸುಮಾರು 210 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಸುಮಾರು 19437 ಮಿಶ್ರ ತಳಿ ರಾಸುಗಳಿದ್ದು, 48409 ನಾಟಿ ಹಸುಗಳಿವೆ. ಕುರಿಗಳು 44990, ಮೇಕೆಗಳು 49191, ಕೋಳಿಗಳು 79398 ಇದ್ದು, ಸಕಾಲಕ್ಕೆ ಪಶು ಇಲಾಖೆಯ ಸೇವೆ ದೊರಕದೆ ರೈತರು ಬಾರಿ ನಷ್ಟಕ್ಕೊಳಗಾಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ತಾಲೂಕಿನಲ್ಲಿ ಅಗತ್ಯ ಮಳೆ ಬೀಳದೆ ಹೈನುಗಾರಿಯಲ್ಲಿ ತೊಡಗಿರುವ ರೈತರು ಬರದ ಭೀತಿ ಎದುರಿಸುತ್ತಿದ್ದಾರೆ. ಪಶುಗಳಿಗೆ ನೀರು, ಮೇವಿನ ಹಾಹಾಕಾರ ಎದುರಿಸಲು ಒಂದು ಹೊರೆ ರಾಗಿ ಹುಲ್ಲಿಗೆ 500 ರು. ನಿಂದ ಸಾವಿರ ರು. ಹಣ ತೆತ್ತು ಹಸು ಸಾಕಾಣಿಕೆ ಮಾಡಲಾಗುತ್ತಿದೆ. ಎಲ್ಲೂ ಮೇವು ಬ್ಯಾಂಕ್ ತೆರೆಯಲಿಲ್ಲ, ಸರ್ಕಾರ ಕನಿಷ್ಠ ರಾಗಿ ಹುಲ್ಲು ಖರೀದಿಸಿ ಉಚಿತವಾಗಿ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಿಲ್ಲ.ಪಶು ಆಹಾರದ ಕೊರತೆಯೂ ರೈತರನ್ನು ಕಾಡದೆ ಬಿಟ್ಟಿಲ್ಲ. ಇಷ್ಟೊಂದು ಸಂಕಷ್ಟ ನಡುವೆ ರೈತರು ಹೈನುಗಾರಿಕೆಯಿಂದ ಬದುಕಿನ ಬಂಡಿ ಸಾಗುಸುತ್ತಿದ್ದು, ಇದರ ಜತೆಗೆ ಪಶು ಆರೋಗ್ಯ ರಕ್ಷಣೆಗೆ ಪಶು ವೈದ್ಯರ ಕೊರತೆಯಿಂದ ಹಯನೋದ್ಯಮಿಗಳಿಗೆ ಭಾರಿ ಹೊಡೆತ ಬೀಳಲಿದೆ. ಬಹುತೇಕ ರೈತರು ಆರ್ಥಿಕವಾಗಿ ಭಾರಿ ನಷ್ಟಕ್ಕೆ ಒಳಗಾಗಿದ್ದು, ಇದನ್ನೇ ನಂಬಿ ಬದುಕುತ್ತಿರುವ ಬಡ ಕುಟಂಬಗಳು ಸಂಕಷ್ಟಕ್ಕೊಳಗಾಗುವ ಆತಂಕ ಎದುರಿಸಬೇಕಿದ್ದು, ಸಾಲದ ಶೂಲಕ್ಕೆ ಸಿಲುಕುವಂತಾಗಿದೆ.
ಸಕಾಲಕ್ಕೆ ಪಶುಗಳ ಆರೋಗ್ಯ ರಕ್ಷಣೆ, ಮುಂಜಾಗ್ರತಾ ಲಸಿಕೆ ಕಾರ್ಯಕ್ರಮಗಳು, ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳು, ಮೇವು ಅಭಿವೃದ್ಧಿ, ಮುಂತಾದ ರೈತ ಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದ್ದು, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು ವೈದರು ಮತ್ತು ಸಿಬ್ಬಂದಿಗಳ ಅವಶ್ಯಕತೆ ಇದೆ.
ನಿವೇಶನದ ಕೊರತೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಅವರ ತವರಲ್ಲೂ ನೂತನ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ ನಿವೇಶನದ ಕೊರತೆಯಿದೆ. ಬೆಳಗುಂಬ, ಗವಿನಾಗಮಂಗಲ, ಸಂಕೀಘಟ್ಟ, ಸೋಲೂರು ಹೋಬಳಿ ಬಿಟ್ಟಸಂದ್ರದಲ್ಲಿ ನಿವೇಶನ ಇಲ್ಲದೆ ಪಶುಚಿಕಿತ್ಸಾ ಕೇಂದ್ರ ಕಟ್ಟಡ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಬ್ಯಾಲಕೆರೆ, ತಗ್ಗೀಕುಪ್ಪೆ, ಕೆ.ಜಿ.ನಗರ, ಬಾಣವಾಡಿಯಲ್ಲಿ ಶಿಥಿಲ ಕೇಂದ್ರವಿದ್ದು, ನೂತನ ಕಟ್ಟಡ ನಿರ್ಮಾಣವಾಗಬೇಕಿದೆ. ಅಜ್ಜನಹಳ್ಳಿ, ಮಣಿಗನಹಳ್ಳಿ ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಇಲ್ಲ, ಸಿಬ್ಬಂದಿಗಳು ಇಲ್ಲದೆ ಚಿಕಿತ್ಸಾ ಕೇಂದ್ರ ಅನಾಥವಾಗಿದೆ. ಮಂಚನಬೆಲೆ ಪ್ರಾಥಮಿಕ ಪಶು ಆರೋಗ್ಯ ಕೇಂದ್ರ, ಹೊಸಪಾಳ್ಯ, ಹುಲೀಕಟ್ಟೆ, ಕೆ.ಜಿ.ನಗರದಲ್ಲಿಯೂ ಪಶು ವೈದ್ಯಕೀಯ ಸಹಾಯಕರಿಲ್ಲದೆ ಹುದ್ದೆಗಳು ಖಾಲಿಯಿದ್ದು, ಜಾನುವಾರು ಅಧಿಕಾರಿಯ ಹುದ್ದೆಯೂ ಖಾಲಿಯಿದೆ.
ಕಳವಳ: ಒಂದೆಡೆ ತಾಲೂಕಿನಲ್ಲಿ ಹೈನೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತಾ ಕ್ಷೀರಕ್ರಾಂತಿ ನಡೆದಿದೆ. ಮತ್ತೊಂದೆಡೆ ಪಶು ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯಿಂದ ಸಕಾಲಕ್ಕೆ ಸೇವೆ ದೊರಕದೆ ಹೈನೋದ್ಯಮ ಹಳ್ಳ ಹಿಡಿಯಬಹುದು ಎಂಬ ಕಳವಳ ರೈತರನ್ನು ಕಾಡುತ್ತಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ತಾಲೂಕಿನಲ್ಲಿ ಕೊರತೆಯಿರುವ ಹುದ್ದೆಗಳನ್ನು ತುಂಬಲು ಅಗತ್ಯ ಕ್ರಮ ವಹಿಸುವಂತೆ ಇಲ್ಲಿನ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಶಾಸಕ ಎಚ್.ಸಿ. ಬಾಲಕೃಷ್ಣ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೈನುಗಾರಿಕೆ ಹಳ್ಳ ಹಿಡಿಯುವ ಮುನ್ನ ತಾಲೂಕಿನಲ್ಲಿ ಕೊರತೆಯಿರುವ ಪಶು ಇಲಾಖೆಯಲ್ಲಿನ ವೈದ್ಯರ, ಸಿಬ್ಬಂದಿಗಳ ಹುದ್ದೆಗಳನ್ನು ತುಂಬಲು ಬಾಲಕೃಷ್ಣ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂಬುದು ಬಹುತೇಕ ರೈತರ ಅಭಿಮತ.
ತಿರುಮಲೆ ಶ್ರೀನಿವಾಸ್