ಸುದ್ದಿ ಸಂಕ್ಷೇಪ
ಅನ್ಯರ ಭೂಮಿ ಅತಿಕ್ರಮಿಸಿಲ್ಲ: ಡಿಕೆಶಿ
ಕನಕಪುರ: ರಾಜಕೀಯ ದುರುದ್ದೇಶದಿಂದ ತಮ್ಮ ಚಾರಿತ್ರ್ಯಕ್ಕೆ ಮಸಿಬಳಿಯುವ ಸಲುವಾಗಿ ಜೆಡಿಎಸ್ ಮುಖಂಡರು ಷಡ್ಯಂತ್ರ ರಚಿಸಿ ಅಪಪ್ರಚಾರ ನಡೆಸಿದ್ದಾರೆ. ಅವರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ತಾವಾಗಲೀ ತಮ್ಮ ಸಹೋದರರಾಗಲೀ ಅನ್ಯರ ಭೂಮಿ ಅತಿಕ್ರಮಿಸಿಲ್ಲ ಎಂದು ಶಾಸಕ ಡಿ.ಕೆ.ಶಿವಕುಮಾರ್ ಲಿಖಿತ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕೋಡಿಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಮನೆ ಮುಂಭಾಗದ ರಸ್ತೆಯನ್ನು ಗುಂಡಿ ಬಗೆದು ಓಡಾಡಲು ಶಾಸಕರ ಸಹೋದರ ತೊಂದರೆ ನೀಡಿದ್ದಾರೆ ಎಂಬ ಆರೋಪ ಹಾಗೂ ದೂರುಗಳಿಗೆ ಉತ್ತರಿಸಿದ ಶಾಸಕ ಶಿವಕುಮಾರ್, ಕೋಡಿಹಳ್ಳಿ ಗ್ರಾಮದಲ್ಲಿ ತಮ್ಮ ಕುಟುಂಬದ ಸ್ವಾಧೀನದಲ್ಲಿರುವ ಜಮೀನಿಗೆ ಕಾಂಪೌಂಡ್ ನಿರ್ಮಿಸಲು ಪಾಯ ತೆಗೆಯುತ್ತಿದ್ದು ಆ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಅಡ್ಡಿಪಡಿಸಿದ್ದಾರೆ. ಅಲ್ಲದೆ ನಮ್ಮ ಜಾಗವನ್ನು ಅತಿಕ್ರಮಿಸಿಕೊಂಡು ಮನೆಯನ್ನು ನಿರ್ಮಿಸಿದ್ದರೂ ನಮ್ಮ ಮೇಲೆಯೇ ಅತಿಕ್ರಮಣದ ಸುಳ್ಳು ದೂರು ನೀಡಿದ್ದಾರೆ.
'ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಿ'
ನೆಲಮಂಗಲ: ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು. ಅವರು ಬುಧವಾರ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಕುರಿತು ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುತ್ತಾ ಸರ್ಕಾರದಿಂದ ಬರುವ ಅನುದಾನಗಳು ಸೋರಿಕೆಯಾಗದೆ ಕಾನೂನು ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ದೇವಾಂಗ ಮಂಡಳಿಗೆ ಆಯ್ಕೆ: ಅಭಿನಂದನೆ
ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಳಿ, ದೊಡ್ಡಬಳ್ಳಾಪುರದ ಗೌ. ಕಾರ್ಯದರ್ಶಿಯಾಗಿ ಎ.ಎಸ್. ಕೇಶವ ಅವರು ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಬೆಂಗಳೂರಿನ ದೇವಾಂಗ ಸಂಘದ ನಾಮಕರಣ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಅವರಿಗೆ ದೊಡ್ಡಬಳ್ಳಾಪುರ ದೇವಾಂಗ ಸಂಘದ ಸದಸ್ಯರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಮಂಡಳಿಯ ನಿರ್ದೇಶಕರಾದ ಬಿ.ಎ. ಸತ್ಯಗಂಗಾಧರ್, ಬಿ.ಸಿ. ಆದಿಲಕ್ಷ್ಮಮ್ಮ ಮತ್ತು ಬಿ.ಆರ್. ಉಮಾಕಾಂತ್ ಅವರು ಕೇಶವ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಕೇಶವ ಅವರು ಉತ್ತಮ ಕಾರ್ಯಗಳನ್ನು ಕೈಗೊಂಡು, ದೇವಾಂಗ ಸಮುದಾಯಕ್ಕೆ ಉತ್ತಮ ಹೆಸರನ್ನು ತರಬೇಕೆಂದು ತಿಳಿಸಿದ್ದಾರೆ.
ಗಂಗಮ್ಮ ದೇವಿಗೆ ವಿಶೇಷ ಪೂಜೆ
ಸೂಲಿಬೆಲೆ: ಪಟ್ಟಣದ ಹೊರವಲಯ ಭಾಗಕ್ಕೆ ಹೊಂದಿಕೊಂಡಿರುವ ಗಂಗಮ್ಮ ದೇಗುಲದಲ್ಲಿ ಗ್ರಾಮದ ಒಳಿತಿಗಾಗಿ ಮಂಗಳವಾರ ಹೋಮ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುರಾತನ ಕಾಲದಿಂದಲೂ ಧಾರ್ಮಿಕವಾಗಿ ಉತ್ತಮ ಇತಿಹಾಸವನ್ನು ಹೊಂದಿರುವ ದೇಗುಲದಲ್ಲಿ ಗ್ರಾಮಸ್ಥರು ಪ್ರತಿವರ್ಷ ಗ್ರಾಮದ ಒಳಿತಿಗಾಗಿ ಹೋಮ, ಹವನಗಳನ್ನು ನಡೆಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ಇಂದು ಹಿಂದೂ ಸಾಮ್ರಾಜ್ಯೋತ್ಸವ
ಸೂಲಿಬೆಲೆ: ಪಟ್ಟಣ ಮೈಡ್ರೀಮ್ ವಿಲೇಜ್ ಪೌಂಡೇಷನ್ ಸಂಸ್ಥೆ ವತಿಯಿಂದ ಜೂ.20 ರಂದು ಹಿಂದೂ ಸಾಮ್ರಾಜ್ಯೋತ್ಸವವನ್ನು ಆಯೋಜಿಸಲಾಗಿದೆ. ಸಂಜೆ 4 ಗಂಟೆ ಶಾರದ ಮಂದಿರದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ.