ಅಕ್ರಮ ಮರಳುಗಾರಿಕೆ ನಿಷೇಧಿಸಿ ಪ್ರತಿಬಂಧಕಾಜ್ಞೆ ಜಾರಿ
ಕ.ಪ್ರ. ವಾರ್ತೆ ರಾಮನಗರ ಜೂ.20
ಅಕ್ರಮ ಮರಳುಗಾರಿಕೆಗೆ ಕೂಡಲೇ ಕಡಿವಾಣ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ನೀಡಿದ್ದ ಎಚ್ಚರಿಕೆಯಿಂದ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ. ಕಣ್ವ ಹಗೂ ಅರ್ಕಾವತಿ ನದಿ ಪಾತ್ರಗಳ ಸುತ್ತಮುತ್ತಲಿನ 100 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವುದನ್ನು ನಿಷೇಧಿಸಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದೆ.
ರಾಮನಗರ ಹಾಗೂ ಚನ್ನಪಟ್ಟಣ ತಾಲೂಕುಗಳನ್ನು ಅಕ್ರಮ ಮರಳು ಸಾಗಾಣಿಕೆಯ ನಿಷೇಧಿತ ಪ್ರದೇಶವೆಂದು ಘೋಷಿಸಿ ಈ ಹಿಂದೆಯೇ ಆದೇಶ ಹೊರಡಿಸಲಾಗಿತ್ತು. ಆದರೆ ಅಕ್ರಮ ಮರಳುಗಾರಿಕೆ ಮಾತ್ರ ರಾಜಾರೋಷವಾಗಿ ಮುಂದುವರಿದಿತ್ತು.
ಅರ್ಕಾವತಿ ಮತ್ತು ಕಣ್ವ ನದಿ ಪಾತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಆಳವಾಗಿ ಗುಂಡಿಗಳನ್ನು ಬಗೆದು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದೇ ಅಲ್ಲದೆ ಸರ್ಕಾರದ ಖಜಾನೆಗೂ ಅಪಾರ ನಷ್ಟ ಉಂಟಾಗುತ್ತಿತ್ತು.
ಸಚಿವರ ತರಾಟೆ: ಜೂ.17ರಂದು ನೂತನ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ ಜಿಲ್ಲಾಡಳಿವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೂ ಒಂದು ವಾರದೊಳಗೆ ಕಡಿವಾಣ ಹಾಕುವಂತೆ ತಾಕೀತು ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡಿರುವ ಉಪ ವಿಭಾಗಾಧಿಕಾರಿ ಡಾ.ಎಂ.ಎನ್.ರಾಜೇಂದ್ರ ಪ್ರಸಾದ್ ಅವರು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 144(2)ರ ಪ್ರಕಾರ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದನ್ವಯ ಅರ್ಕಾವತಿ ಹಾಗೂ ಕಣ್ವ ನದಿ ಪಾತ್ರಗಳ ಸುತ್ತಮುತ್ತಲಿನ 100 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಮರಳು ತೆಗೆದು ಸಾಗಾಣಿಕೆ ಮಾಡುವುದನ್ನು ಹಾಗೂ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಈ ನಿಷೇಧಿತ ಪ್ರದೇಶದಲ್ಲಿ ಬೋಟುಗಳನ್ನು ಅಳವಡಿಸಿ ಮರಳನ್ನು ಫಿಲ್ಟರ್ ಮಾಡುವುದು, ಭಾರಿ ವಾಹನಗಳಾದ ಲಾರಿಗಳು, ಟಿಪ್ಪರ್ಗಳು, ಜೆಸಿಬಿ, ಟ್ರಾಕ್ಟರ್ ಮತ್ತು ಇತರೆ ವಾಹನಗಳು ಓಡಾಡುವುದು, ಮರಳು ಉತ್ಪಾದನೆ ಮತ್ತು ಎತ್ತುವಳಿ ಮಾಡುವುದು ಹಾಗೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಆಯುಧ ಹಿಡಿದು ತಿರುಗಾಡುವುದನ್ನು ನಿಷೇಧಿಸಿರುವುದಾಗಿ ಆದೇಶದಲ್ಲಿ ತಿಳಿಸಿದೆ. ಆದೇಶವನ್ನು ಆಯಾ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಜಾರಿಗೊಳಿಸಲು ಸೂಚಿಸಲಾಗಿದೆ.