ಗ್ರಾಮಸಭೆಗೆ ಅಧಿಕಾರಿಗಳ ಗೈರು
ಕ.ಪ್ರ. ವಾರ್ತೆ ಸೂಲಿಬೆಲೆ ಜೂ.20
ಸರ್ಕಾರಿ ಸೌಲಭ್ಯಗಳನ್ನು ಗ್ರಾಮಸಭೆಯಲ್ಲಿ ಸಾರ್ವಜನಿಕರಿಗೆ ತಿಳಿಸಿ ಇದನ್ನು ಪಡೆಯಲು ಸಹಕಾರಿಯಾಗಬೇಕಿದ್ದ ನಾನಾ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿ ನಿರ್ಲಕ್ಷ್ಯತನ ತೋರಿದ್ದು ಇವರ ಮೇಲೆ ಕಠಿಣಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ಗುರುವಾರ ಸೂಲಿಬೆಲೆಯಲ್ಲಿ ನಡೆಯಿತು.
ಇಲ್ಲಿನ ಗ್ರಾಪಂ ಆವರಣದಲ್ಲಿ 2013-14 ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ 2012-13 ಸಾಲಿನ ಜಮಾ ಮತ್ತು ಖರ್ಚು ವೆಚ್ಚದ ವಿವರಗಳನ್ನು ಸಭೆಯ ಮುಂದಿಡಲು ಪಿಡಿಒ ನಾಗರಾಜ್ ಎದ್ದು ನಿಲ್ಲುತ್ತಿದ್ದಂತೆ ಸಭೆಗೆ ಬಂದ ಇಲಾಖೆವಾರು ಅಧಿಕಾರಿಗಳು ಯಾರ್ಯಾರು ಎಂಬುದು ತಿಳಿಯಲಿ. ಸಭೆಯ ಮೂಲಕ ಸರ್ಕಾರಿ ಸೌಲಭ್ಯಗಳ ಮತ್ತು ಇದನ್ನು ಪಡೆಯಲು ಕ್ರಿಯಾ ಯೋಜನೆಯ ಪಟ್ಟಿ ತಯರಿಸುವಂತ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಗಳು ಸಭೆಯಲ್ಲಿ ನಾಪತ್ತೆಯಾಗಿದ್ದರೆ ಸಭೆ ನಡೆಸುವುದು ಯಾತಕ್ಕೆ ಎಂದು ಸದಸ್ಯರು ತಕರಾರು ತೆಗೆದರು. ಇವರ ಮೇಲೆ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ ಪಿಡಿಒ,ಕಳೆದ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ 30 ಲಕ್ಷ ವೆಚ್ಚದ ಗುರಿಯನ್ನು ಹೊಂದಲಾಗಿತ್ತು. ಇದನ್ನು ಮೀರಿ 1ಕೋಟಿ 75 ಲಕ್ಷದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಈ ಸಾಲಿನಲ್ಲಿ 60 ಲಕ್ಷದ ಗುರಿಯನ್ನು ಹೊಂದಿದ್ದು,ಈಗಾಗಲೇ ಸುಮಾರು 100 ಕಾಮಗಾರಿಗಳನ್ನು ನಡೆಸಲು ಅರ್ಜಿಗಳು ಬಂದಿವೆ.ವಸತಿಯೋಜನೆಯಲ್ಲಿ ಮೂದಲ ಕಂತಿನ ಹಣಪಡೆದ 91 ಫಲಾನುಭವಿ ಮನೆಗಳು ನಿರ್ಮಾಣ ಅಪೂರ್ಣಗೊಂಡಿದ್ದು, ಇವರಿಗೆ ಒಂದು ವಾರಗ ಗಡವು ನೀಡಿದ್ದು, ಅಷ್ಟರಲ್ಲಿ ಮನೆ ನಿರ್ಮಾಣ ಮಾಡದ ಪಕ್ಷದಲ್ಲಿ ಹಣ ವಾಪಸ್ ನೀಡುವಂತೆ ನೋಟಿಸ್ ನೀಡಲಾಗುವುದು ಎಂದರು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿ, ವಾರ್ಡುಗಳಿಗೆ ನೀರು ಸರಬರಾಜು
ವಿಳಂಬ, ಕಾಮಗಾರಿಯಾದರೂ ಮನೆಗಳಿಗೆ ಬಿಲ್ ಹಣ ನೀಡದಿರುವುದು, ಸಾರ್ವಜನಿಕ ಶೌಚಾಲಯ ವಿಲ್ಲದಿರುವ ಬಗ್ಗೆ ಚರ್ಚೆ ನಡೆಯಿತು. ಪಟ್ಟಣದಲ್ಲಿ ಸುಮಾರು 300 ರಷ್ಟು ಅಕ್ರಮ ಸಂಪುಗಳ ಸಂಪರ್ಕವಿದ್ದು, ಇದನ್ನು ತೆರವು ಮಾಡಿದರೆ ನೀರಿನ ಸಮಸ್ಯೆನ್ನು ನೀಗಿಸಬಹುದು ಎಂದು ಪಿಡಿಒ ಹೇಳುತ್ತಿದ್ದಂತೆ ವಾದ-ಪ್ರತಿವಾದಗಳು ನಡೆದವು. ನಂತರ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ನೋಟಿಸ್ ನೀಡುವಂತೆ ಒತ್ತಾಯಿಸಿದರು. ಮಾಜಿ ಶಾಸಕ ಸೂ.ರಂ ರಾಮಯ್ಯ, ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ, ತಾಪಂ ಮಾಜಿ ಸದಸ್ಯ ಚನ್ನಪ್ಪ, ಹಿರಿಯ ಮುಖಂಡ ಮರುವೆ ಕೃಷ್ಣಪ್ಪ, ಶಿವಣ್ಣ, ನೋಡಲ್ ಅಧಿಕಾರಿ ಮಂಜುಳಾ ದೇವಿ, ಮುನಿರಾಜ್, ರಾಮಯ್ಯ, ಮೌಲಖಾನ್, ಇಲ್ಲೂ, ಇಸಾಕ್,ಅಮ್ಜಾದ್, ರಾಘವೇಂದ್ರ ಹಲವರು ಹಾಜರಿದ್ದರು.