ಪಿಯುಸಿ ವಿದ್ಯಾರ್ಥಿಗಳಿಗೆ ಐ-ಟಾಪ್ಪರ್ ಟ್ಯಾಬ್ಲೆಟ್
ಬೆಂಗಳೂರು: ಆಪ್‌ಥಾಟ್ಸ್ ಸಾಫ್ಟ್‌ವೇರ್ ಕಂಪನಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ನೂತನ ಐ-ಟಾಪ್ಪರ್ ಟ್ಯಾಬ್ಲೆಟ್ ಹೊರತಂದಿದೆ.
ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಟ್ಯಾಬ್ಲೆಟ್‌ಅನ್ನು ಗುರುವಾರ ಪಿಇಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಪಿಯುಸಿ ಎಂಬುವುದು ಶೈಕ್ಷಣಿಕ ಹಂತದಲ್ಲಿ ಬಹಳ ಮುಖ್ಯ ಭಾಗ. ಈ ಟ್ಯಾಬ್‌ನಲ್ಲಿ ಗಣಿತ, ಜೀವಶಾಸ್ತ್ರ, ರಾಸಾಯನಿಕ ಶಾಸ್ತ್ರ ಪುಸ್ತಕಗಳು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿರುವುದರಿಂದ ವಿದ್ಯಾರ್ಥಿಗಳು ಸುಲಭವಾಗಿ ಓದಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಸರ್ಕಾರ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಬೇಕು ಎಂದು ಚಿಂತಿಸಿರುವುದರಿಂದ ಈ ನೂತನ ಟ್ಯಾಬ್ಲೆಟ್ ನೀಡುವುದೇ ಉತ್ತಮ. ಇದರಲ್ಲಿ ಸಾಕಷ್ಟು ಅಂಶಗಳು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಕ್ರಿಯೇಟಿವ್ ಎಕ್ಸ್‌ಪ್ರೆಸ್ ಕಾರ್ಯಕಾರಿ ನಿರ್ದೇಶಕ ರಾಮಕೃಪಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಗಾಗ ವಿದ್ಯುತ್ ವ್ಯತ್ಯಯವಾಗುವುದರಿಂದ ಪರೀಕ್ಷೆ ವೇಳೆ ವ್ಯಾಸಂಗ ಮಾಡಲು ಕಷ್ಟವಾಗುತ್ತದೆ. ಈ ಟ್ಯಾಬ್ಲೆಟ್ ಖರೀದಿಸಿದಲ್ಲಿ ಎಲ್ಲಾ ಮಾಹಿತಿಯು ದೊರೆಯುವುದರಿಂದ ಬಹಳ ಸುಲಭವಾಗಿ ಅಭ್ಯಾಸ ಮಾಡಬಹುದು. ನೆಟ್, ಐಐಟಿ ಪರೀಕ್ಷೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಟ್ಯಾಬ್ಲೆಟ್‌ನಲ್ಲಿ ವೀಡಿಯೋ, ಡ್ಯಾಶ್ ಬೋರ್ಡ್, ಟೆಸ್ಟ್ ಎಂಬ ಅನೇಕ ಅಪ್ಲಿಕೇಷನ್‌ಗಳಿದ್ದು, 24ಜಿಬಿ ಸಂಗ್ರಹಣಾ ಸಾಮರ್ಥ್ಯ, ಆ್ಯಂಡ್ರಾಯ್ಡ್ 4.0.3 ಐಸ್ ಕ್ರೀಮ್ ಸ್ಯಾಂಡ್‌ವಿಚ್ ಸಾಫ್ಟ್‌ವೇರ್ ಹೊಂದಿದೆ ಎಂದರು. ಸಿಮ್ ಹೊಂದಿರುವ ಟ್ಯಾಬ್ಲೆಟ್ ಬೆಲೆ 11,500 ಮತ್ತು ಸಿಮ್ ಸೌಲಭ್ಯ ಇಲ್ಲದಕ್ಕೆ 10,500 ಮೌಲ್ಯಹೊಂದಿದೆ. ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ರವಳಿ ಎಂಬ ವಿದ್ಯಾರ್ಥಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಲಾಯಿತು.