ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

Rashmi Kasaragodu
Updated On : 21 Jun 2013, 11:36 am

ಆನೇಕಲ್ಲು: ಜನರ ಸಮಸ್ಯೆಗಳಿಗೆ ಪರಿಹಾರ ನೀಡಿ, ಆಗದಿದ್ದರೆ ಸ್ಥಾನಕ್ಕೆ ರಾಜಿನಾಮೆ ಕೊಡಿ ಎಂದು ಶಾಸಕ ಬಿ. ಶಿವಣ್ಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅವರು ತಾಲೂಕಿನ ಅಡಿಗಾರ ಕಲ್ಲಹಳ್ಳಿಯಲ್ಲಿ ನಡೆದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಶ್ರಮಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಮಾಲೋಚನೆ ನಡೆಸಿ ಪರಿಹಾರ ಕೈಗೊಳ್ಳಬೇಕು ಎಂದರು. ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯುವಂತಾಗಬೇಕು. ಸಣ್ಣ ಪುಟ್ಟ ಕೆಲಸಗಳಿಗೂ ತಿರುಗಾಡಿಸಿ ತೊಂದರೆ ನೀಡಬಾರದು. ಜನಸಾಮಾನ್ಯರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಸಂಭಂದವಿದ್ದಾಗ ಮಾತ್ರ ಗ್ರಾಮದ ಅಭಿವೃದ್ಧಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದರು. ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡ ಇರಬಾರದು.      ನಿಷ್ಪಕ್ಷಪಾತವಾಗಿ ಸರ್ಕಾರದಿಂದ ಬರುವ ಸವಲತ್ತುಗಳು ಸಾರ್ವಜನಿಕರಿಗೆ ದೊರೆಯಬೇಕು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದರು. ತಾಲೂಕಿನಾದ್ಯಂತ ಡೆಂಘೀ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಹಳ್ಳಿಯ ಪಂಚಾಯ್ತಿಗಳು  ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಬೇಕು ಎಂದರು. ಹಂದೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾದೇವಿ, ಉಪಾಧ್ಯಕ್ಷ ರಾಮಪ್ಪ, ಪಿಡಿಒ ರಂಗಸ್ವಾಮಿ, ಸದಸ್ಯರಾದ ಕೃಷ್ಣಾರೆಡ್ಡಿ, ವನಮಾಲ, ಮಲ್ಲೇಶ್ವರಿ, ಅಮರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಹಾಜರಿದ್ದರು.
ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆ
ಬೆಂಗಳೂರು: ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ 'ದಿ ಹಿಮಾಲಯ ಡ್ರಗ್ ಕಂಪನಿ' ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆ ಏರ್ಪಡಿಸಿದೆ. ಭಾರತದ ಎಲ್ಲಾ ಆಯುರ್ವೇದಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕ್ವಿಜ್ನಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆಯು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಜೂ. 28ರಂದು ನಡೆಯಲಿದೆ. ಈ ಸ್ಪರ್ಧೆಯನ್ನು ಭಾರತದ ಸುಮಾರು 192 ಆಯುರ್ವೇದಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಲಾಗಿದೆ.
ರಿಯಾಯಿತಿ ದರದ ವಿಮಾನಯಾನ
ಬೆಂಗಳೂರು: ಎಮಿರೇಟ್ಸ್ ವಿಮಾನಯಾನ ಸಂಸ್ಥೆ 3 ದಿನಗಳ ದುಬೈ ಪ್ರಯಾಣಕ್ಕೆ ಶೇ. 25ರ ರಿಯಾಯಿತಿ ದರ ಪ್ರಕಟಿಸಿದೆ. ಜೂನ್ 20ರಿಂದ 22ರವರೆಗೆ ತನ್ನ ವ್ಯಾಪಾರಿ ವರ್ಗ ಪ್ರಯಾಣ ದರಗಳಲ್ಲಿ ಮೂರು ದಿನಗಳ ರಿಯಾಯಿತಿಯನ್ನು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ. ದುಬೈನಲ್ಲಿ ಜುಲೈ 7ರವರೆಗೆ ಈ ಶಾಪಿಂಗ್ ಬೊನಾನ್ಜ ಜಾರಿಯಲ್ಲಿರುತ್ತದೆ. ದುಬೈನ ಬೇಸಿಗೆ ಪಂಚಾಂಗದಲ್ಲಿ ಈ ಉತ್ಸವ ಮಹತ್ವಪೂರ್ಣದ್ದಾಗಿದೆ ಎಂದು ಸಂಸ್ಥೆ ಹೇಳಿದೆ.




ವಿದ್ಯಾದಾನ ಮಹಾದಾನ: ವಿ. ವಿಜಿಕುಮಾರ್
ಹೊಸಕೋಟೆ: ಭಾರತ ಭವಿಷ್ಯ ನಿಧಿಯ ಸದಸ್ಯರಾದ ವಿ.ವಿಜಿಕುಮಾರ್ ತಮ್ಮ ತಾತ ಮುನಿನೈನಪ್ಪ ಜ್ಞಾಪಕ ಮೂರನೇ ವರ್ಷದ ಅಂಗವಾಗಿ ಪಟ್ಟಣದ ಗಾಣಿಗರಪೇಟೆಯ ಗಾಯತ್ರಿ ವಿದ್ಯಾಮಂದಿರದ ಎಲ್ಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ನೋಟ್ಬುಕ್ ವಿತರಿಸಿ ಇಂದಿನ ಮಕ್ಕಳೆ ನಾಳಿನ ಪ್ರಜೆಗಳು, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಿ ಪಾಠ ಹಾಗೂ ಕ್ರೀಡೆ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲೆ ಮುಖ್ಯೋಪಾಧ್ಯಾಯರು ಹಾಗೂ ಉಪಾಧ್ಯಾಯರು ಹಾಜರಿದ್ದರು.


ಸೂಪರ್ಮಾಮ್ ಕಾರ್ಯಕ್ರಮ
ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರ ಮಂತ್ರಿ ಮಾಲ್ನಲ್ಲಿ ಮಹಿಳೆಯರಿಗೆ 'ಸೂಪರ್ ಮಾಮ್' ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಎಲ್ಲಾ ಅಮ್ಮಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವಿಶೇಷವಾದ ಅಮ್ಮಂದಿರ ಕಿರೀಟವನ್ನು ಪಡೆಯಲು ಈ ಮೂಲಕ ಸೂಕ್ತ ವೇದಿಕೆ ಕಲ್ಪಿಸಿದೆ. ಸೂಪರ್ ಅಮ್ಮ ಸ್ಪರ್ಧೆ ಜು. 6 ಮತ್ತು 7ರಂದು ಜರುಗಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೊನೆಯ ದಿನಾಂಕ ಜೂ.30.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement