ಜಿಪಂ ಅಧ್ಯಕ್ಷ ಮುದ್ದುರಾಜ್ ರಾಜಿನಾಮೆ, ಅಂಗೀಕಾರಕ್ಕೆ ಮುನ್ನ ಬೀಳ್ಕೊಡುಗೆ
ಕ.ಪ್ರ. ವಾರ್ತೆ ರಾಮನಗರ ಜೂ.21
ಜೆಡಿಎಸ್ ವರಿಷ್ಠರ ಸಮ್ಮುಖದಲ್ಲಿ ಆಗಿದ್ದ ಒಡಂಬಡಿಕೆ ಸೂತ್ರದಂತೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕೆ. ಮುದ್ದುರಾಜ್ ಯಾದವ್ ರಾಜಿನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಪ್ರಸಕ್ತ ಅವಧಿಯಲ್ಲಿ 5ನೇ ಅಧ್ಯಕ್ಷರ ಬದಲಾವಣೆಗೆ ವೇದಿಕೆ ಸಜ್ಜಾಗಿದೆ.
ಮುದ್ದುರಾಜ್ ಯಾದವ್ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದು, ಮಧ್ಯಾಹ್ನ ಆಯೋಜಿಸಿದ್ದ ಚಹಾಕೂಟದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಪದತ್ಯಾಗ ಮಾಡಿರುವ ಅವರು ಒಂದೊಮ್ಮೆ ನಿಲುವು ಬದಲಿಸದಿದ್ದಲ್ಲಿ ಜು.6ಕ್ಕೆ ರಾಜಿನಾಮೆ ಅಂಗೀಕೃತವಾಗಲಿದ್ದು, ಬಳಿಕ ಉಪಾಧ್ಯಕ್ಷರೇ ಪ್ರಭಾರ ಅಧ್ಯಕ್ಷರಾಗುವರು. ನಂತರ ಚುನಾವಣೆಗೆ ಅಧಿಸೂಚನೆ ಹೊರ ಬೀಳಲಿದೆ.
ಅಧಿಕಾರ ಹಂಚಿಕೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಆಗಿರುವ ಅಧಿಕಾರ ಹಂಚಿಕೆಯ ಒಡಂಬಡಿಕೆ ಸೂತ್ರದಂತೆ ಮುದ್ದುರಾಜ್ ಯಾದವ್ ಇನ್ನೂ ಒಂದು ತಿಂಗಳು ಮುಂಚೆಯೇ ರಾಜಿನಾಮೆ ಸಲ್ಲಿಸಬೇಕಿತ್ತು. ಇದೀಗ ವಿಳಂಬವಾಗಿ ಪದತ್ಯಾಗ ನಿರ್ಧಾರಕ್ಕೆ ಬಂದಿದ್ದಾರೆ. ಜಿಪಂನಲ್ಲಿ ಎರಡನೇ 20 ತಿಂಗಳ ಅವಧಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಈ ಮೀಸಲಿನಡಿ ಇರುವ ಎಲ್ಲ ಮೂವರಿಗೂ ಅಧಿಕಾರ ಹಂಚಿಕೆಯ ತೀರ್ಮಾನವಾಗಿದೆ. ಅದರಂತೆ ಮೊದಲ ಸರದಿ ಮುದ್ದುರಾಜ್ ಯಾದವ್ ಪಾಲಿಗೆ ಲಭಿಸಿತ್ತು.
ಸರದಿಯಲ್ಲಿ ರಾಜು: ಮುದ್ದುರಾಜ್ ಬಳಿಕ ಅಧ್ಯಕ್ಷ ಗಾದಿಯನ್ನು ರಾಮನಗರ ತಾಲೂಕು ಕೈಲಾಂಚ ಕ್ಷೇತ್ರದ ಎಚ್.ಸಿ.ರಾಜು ಮತ್ತು ನಂತರದಲ್ಲಿ ಕೋಡಂಬಳ್ಳಿ ಕ್ಷೇತ್ರದ ಸುಧಾ ರಾಜು ಅವರಿಗೆ ನಿಗದಿಪಡಿಸುವ ತೀರ್ಮಾನ ಜೆಡಿಎಸ್ ಪಡಸಾಲೆಯಲ್ಲಿ ಆಗಿದೆ.
ರಾಜೀನಾಮೆ ಅಂಗೀಕೃತಗೊಂಡು, ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದರೆ ಎಚ್.ಸಿ.ರಾಜು ಅವರು ಅಧ್ಯಕ್ಷ ಹುದ್ದೆಗೇರುವುದು ನಿಶ್ಚಿತವಾಗಿದೆ. ಅವರೂ ತಮ್ಮ ಪಾಲಿಗೆ ನಿಗದಿಪಡಿಸಿದಷ್ಟು ತಿಂಗಳು ದುರ್ಬಾರ್ ಮುಗಿಸಿದ ತರುವಾಯ ಮತ್ತೆ ಸ್ಥಾನ ತೆರವು ಮಾಡಬೇಕಿದೆ.
ಉಪಾಧ್ಯಕ್ಷರ ಬದಲು: ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನವೂ ತಲಾ 10 ತಿಂಗಳಂತೆ ಇಬ್ಬರಿಗೆ ಹಂಚಿಕೆಯಾಗಿದೆ. ಪ್ರಸ್ತುತ ಕನಕಪುರದ ಸಾತನೂರು ಕ್ಷೇತ್ರದ ಗೌರಮ್ಮ ಹುದ್ದೆಯಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಮಾಗಡಿಯ ಹಂಸಕುಮಾರಿ ಅವರಿಗೆ ಅಧಿಕಾರ ಒಲಿಯಬೇಕಿದೆ.
ಒಂದೊಮ್ಮೆ ಸುಧಾ ರಾಜು ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿಯದೆ, ಉಪಾಧ್ಯಕ್ಷ ಸ್ಥಾನಕ್ಕೆ ಸಮ್ಮತಿಸಿದ್ದರೆ ಗೌರಮ್ಮ ಅವರಿಗೆ ಅವಕಾಶವೇ ಇರುತ್ತಿರಲಿಲ್ಲ. ಸುಧಾ ರಾಜು ಹಕ್ಕೊತ್ತಾಯ ಮಂಡಿಸಿದ್ದರೆ ಇಡೀ ಇಪ್ಪತ್ತು ತಿಂಗಳು ಉಪಾಧ್ಯಕ್ಷೆಯಾಗಿ ಅಧಿಕಾರ ಅನುಭವಿಸಬಹುದಿತ್ತು.
ನಿರ್ಗಮನಕ್ಕೆ ಮುನ್ನ ಬೀಳ್ಕೊಡುಗೆ: ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಯಾದವ್ ಅವರು ಇಂದಷ್ಟೇ ರಾಜಿನಾಮೆ ಸಲ್ಲಿಸಿದ್ದಾರೆ. ಅವರ ರಾಜಿನಾಮೆ ಅಂಗೀಕೃತಗೊಂಡು, ಮಾಜಿ ಅಧ್ಯಕ್ಷ ಎನಿಸಿಕೊಳ್ಳಲು 15 ದಿನ ಬಾಕಿ ಇದೆ. ಇಷ್ಟರಲ್ಲಾಗಲೇ ಜಿ.ಪಂ. ಅಧಿಕಾರಿಗಳು ಚಹಾಕೂಟದಲ್ಲಿ ಮಾಲಾರ್ಪಣೆ, ಪುಷ್ಪಗುಚ್ಚ ಸಮರ್ಪಣೆ, ಗುಣಗಾನ ಸಮೇತ ಬೀಳ್ಕೊಡುಗೆ ನೀಡಿದ್ದು ವಿಪರ್ಯಾಸದ ಸಂಗತಿ. ರಾಜಿನಾಮೆ ಅಂಗೀಕಾರ ಆಗುವವರೆಗೂ ಮುದ್ದುರಾಜ್ ಯಾದವ್ ಅವರಿಗೆ ಜಿಲ್ಲಾಡಳಿತದ ಶಿಷ್ಟಾಚಾರ ಪಟ್ಟಿಯಲ್ಲಿ ಸ್ಥಾನ ಕಾಯಂ. ರಾಜಿನಾಮೆ ಅಂಗೀಕಾರ ಆಗುವವರೆಗೆ ಕಡತ ವಿಲೇವಾರಿ, ಸರ್ಕಾರಿ ಕಾರು ಮತ್ತು ಸೌಲಭ್ಯ ಬಳಕೆ, ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ಅಧ್ಯಕ್ಷರ ನ್ಯಾಯಾಲಯ ಕಲಾಪ ನಡೆಸುವುದಕ್ಕೆ ಅಡ್ಡಿ ಇರದು.
ತೃಪ್ತಿ ತಂದಿದೆ: ಯಾದವ್
ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ಅಸಹಾಕಾರದ ನಡುವೆಯೂ ಎಂಟು ತಿಂಗಳು ಉತ್ತಮ ಆಡಳಿತ ನೀಡಿರುವ ತೃಪ್ತಿ ತಮಗಿದೆ ಎಂದು ಪದತ್ಯಾಗ ಪತ್ರ ಸಲ್ಲಿಕೆ ಬಳಿಕ ಪತ್ರಕರ್ತರು ಮತ್ತು ಅಧಿಕಾರಿಗಳಿಗೆ ಆಯೋಜಿಸಿದ್ದ ಚಹಾ ಕೂಟದಲ್ಲಿ ಮುದ್ದುರಾಜ್ ಯಾದವ್ ಹೇಳಿದರು. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ನನ್ನ ರಾಜಕೀಯ ಗುರು. ನಾನಿಂದು ಜಿ.ಪಂ. ಸದಸ್ಯ, ಅಧ್ಯಕ್ಷ ಹುದ್ದೆ ಅನುಭವಿಸುವುದಕ್ಕೆ ಅವರೇ ಕಾರಣ. ಅವರಿಗೆ ನಾನು ಆಭಾರಿಯಾಗಿರುತ್ತೇನೆ. ಮುಂದೆಯೂ ಅವರ ಮಾರ್ಗದರ್ಶನದಲ್ಲೇ ಮುಂದುವರೆಯುವೆ ಎಂದರು.
ಸಿಇಒ ಶ್ಲಾಘನೆ
ಮುದ್ದುರಾಜ್ ಯಾದವ್ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರಿ ವರ್ಗದೊಂದಿಗೆ ಸ್ನೇಹಿತರಂತೆ ವರ್ತಿಸಿದ್ದು, ಯಾರನ್ನೂ ಅನಗತ್ಯವಾಗಿ ನೋಯಿಸುವ ಕೆಲಸ ಮಾಡಿದವರಲ್ಲ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಶ್ಲಾಘಿಸಿದರು. ಚಹಾಕೂಟದಲ್ಲಿ ಜಿ.ಪಂ. ಉಪಾಧ್ಯಕ್ಷೆ ಗೌರಮ್ಮ, ಉಪ ಕಾರ್ಯದರ್ಶಿ ಡಾ.ಎಸ್.ಸಿದ್ದರಾಮಯ್ಯ, ಮುಖ್ಯ ಯೋಜನಾಧಿಕಾರಿ ಭೀಮಯ್ಯ ಭಾಗವಹಿಸಿದ್ದರು.