ಫಲಾನುಭವಿಗಳ ಪಟ್ಟಿ ನೀಡಲು ಸೂಚನೆ
ಕ.ಪ್ರ. ವಾರ್ತೆ ಮಾಗಡಿ ಜೂ.21
32 ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಕೂಡಲೇ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಬಸವ ವಸತಿ, ಅಂಬೇಡ್ಕರ್, ಇಂದಿರಾ ಅವಾಜ್ ಆಶ್ರಯ ಯೋಜನೆಯಡಿ ಈಗಾಗಲೇ ಕಾಮಗಾರಿ ಆರಂಭಿಸಿರುವ ಪಟ್ಟಿ ವಜಾಗೊಂಡಿರುವ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ನೀಡುವಂತೆ ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್ ಕರೆ ನೀಡಿದರು.
ಪಟ್ಟಿ ನೀಡಿ: ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ಪಿಡಿಒಗಳ ಹಾಗು ಕಂಪ್ಯೂಟರ್ ಆಪರೇಟರ್ಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಶ್ರಯ ಪಲಾನುಭವಿಗಳು ಈಗಾಗಲೇ ಪಾಯ ಹಾಕಿದ್ದು, ಅನುದಾನ ವಜಾಗೊಂಡಿರುವವರ ಪಟ್ಟಿಯನ್ನು ಕೂಡಲೇ ತಯಾರಿಸಬೇಕು. ಹೊಸದಾಗಿ ಅರ್ಹರಿಗೆ ಪಡಿತರ ಚೀಟಿ ನೀಡಲು ಪಂಚಾಯ್ತಿಗಳ ಕಂಪ್ಯೂಟರ್ನಲ್ಲಿ ನೊಂದಾಯಿಸಲು ತಡವಾಗುತ್ತಿರುವ ಬಗ್ಗೆ ಅಧ್ಯಕ್ಷರ ಪ್ರಶ್ನಗೆ ಕಂಪ್ಯೂಟರ್ ಆಪರೇಟರ್ಗಳು ಮಾತನಾಡಿ, ಬಿಎಸ್ಎನ್ಎಲ್ ನೆಟ್ವರ್ಕ್ ಸಿಗದೆ ತುಂಬ ತೊಂದರೆಯಾಗುತ್ತಿದೆ. ನೆಟ್ವರ್ಕ್ ಇದ್ದರೂ ಸರ್ವರ್ ಸಮಸ್ಯೆ ಇರುತ್ತದೆ. ಗ್ರಾಮೀಣ ಭಾಗದ ಜನತೆಗೆ ಇದು ಅರ್ಥವಾಗುವುದಿಲ್ಲ, ಪಂಚಾಯ್ತಿ ಕಂಪ್ಯೂಟರ್ ಆಪರೇಟರ್ಗಳಿಂದ ನಮಗೆ ವಿಳಂಬವಾಗುತ್ತಿದೆ ಎಂದು ನಮ್ಮನ್ನೇ ದೂರುತ್ತಾರೆ. ಹೀಗೆಲ್ಲ ತಪ್ಪು ಮಾಹಿತಿಯಿಂದ ಗೊಂದಲವಾಗುತ್ತಿದೆ ಎಂದು ವಿವರಿಸಿದರು.
ಮಾನವೀಯತೆ: ಜನತೆಗೆ ಸಮಸ್ಯೆಯನ್ನು ಕೂಲಂಕುಷವಾಗಿ ಅರ್ಥ ಮಾಡಿಸಬೇಕು. ಪಡಿತರ ಚೀಟಿ ವಿಚಾರವಾಗಿ ಅವರೊಂದಿಗೆ ಸುಮ್ಮನೆ ಚರ್ಚೆಗೆ ಇಳಿಯಬೇಡಿ. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಸಮಾಧಾನದ ಮಾತುಗಳನ್ನಾಡಿ, ಸರಿಯಾದ ಮಾಹಿತಿ ನೀಡುವ ಮೂಲಕ ಅವರ ಕೆಲಸ ಮಾಡಿಕೊಡುವುದನ್ನು ರೂಡಿಸಿಕೊಳ್ಳುವಂತೆ ಅಧ್ಯಕ್ಷ ವೆಂಕಟೇಶ್ ಕಂಪ್ಯೂಟರ್ ಆಪರೇಟರ್ಗಳಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಪಂಚಾಯ್ತಿಗಲ ವಿವಿಧ ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷರು, ಅಧಿಕಾರಿಗಳು, ಸಿಬ್ಬಂದಿ ಒಗ್ಗಟ್ಟಿನಿಂದ ಗ್ರಾಮೀಣ ಜನತೆಯೊಂದಿಗೆ ಉತ್ತಮ ಬಾಂಧವ್ಯ ಇರಲಿ, ಆದಷ್ಟು ಜನತೆಯ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.