ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ವಿ'ಷಭಾವತಿ ದುಷ್ಪರಿಣಾಮ ತಡೆಗೆ ಶೀಘ್ರ ಯೋಜನೆ

Rashmi Kasaragodu
Updated On : 21 Jun 2013, 11:33 am

ಕ.ಪ್ರ.ವಾರ್ತೆ   ರಾಮನಗರ   ಜೂ. 21
ಬೆಂಗಳೂರಿನ ಕೊಳಚೆಯಿಂದ ಕಲುಷಿತವಾಗಿರುವ ವೃಷಭಾವತಿ ನದಿಯಿಂದ ಆಗುತ್ತಿರುವ ದುಷ್ಪರಿಣಾಮ ತಡೆಗೆ ಮೈಸೂರಿನ ಜಲವಾಹಿನಿ ಮೇನೇಜ್ಮೆಂಟ್ ಸರ್ವೀಸಸ್ ಸಂಸ್ಥೆ ಸಹಯೋಗದಲ್ಲಿ ಯೋಜನೆಯೊಂದನ್ನು ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
ವಿವಿಧ ಇಲಾಖೆ ಅಧಿಕಾರಿಗಳು, ಜಲವಾಹಿನಿ ತಂಡದೊಂದಿಗೆ ಶುಕ್ರವಾರ ವೃಷಭಾವತಿ ನದಿ, ಅದರಿಂದ ತುಂಬಿ ತುಳುಕುತ್ತಿರುವ ಬೈರಮಂಗಲ ಕೆರೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಯೋಜನೆ ಕುರಿತು ವಿವರಿಸಿದರು.  
ವೃಷಭಾವತಿ ನದಿಯಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ಪರಿಹಾರ ಕ್ರಮಗಳ ಸಮೀಕ್ಷೆ ನಡೆಸಿ, 1 ತಿಂಗಳೊಳಗೆ ಸಮಗ್ರ ವರದಿ ಸಿದ್ಧಪಡಿಸಲಾಗುತ್ತದೆ. ಆ ಬಳಿಕ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ಮುಂದಾಗಲಾಗುತ್ತದೆ. ಸಂಸ್ಥೆಯ ಹಿಂದಿನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು, ಸದರಿ ಯೋಜನೆ ಒಪ್ಪಿಸಲಾಗುತ್ತಿದೆ ಎಂದು ಶ್ರೀರಾಮರೆಡ್ಡಿ ಹೇಳಿದರು.  
ಸಮಗ್ರ ವರದಿಗೆ ಸೂಚನೆ: ಒಂದು ತಿಂಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ. ವರದಿಯಲ್ಲಿ ಬೆಳೆಗಳ ಮೇಲೆ ನೀರಿನ ಪರಿಣಾಮ, ಮಣ್ಣಿನ ಫಲವತ್ತತೆ, ಜಾನುವಾರಿನ ಹಾಲು ಹಾಗೂ ಕುರಿ, ಮೇಕೆ ಮಾಂಸದ ಮೇಲೆ ಮತ್ತು ಮನುಷ್ಯನ ಆರೋಗ್ಯದ ಮೇಲೂ ಬೀರುತ್ತಿರುವ ಪರಿಣಾಮದ ಅಂಶಗಳನ್ನು ನಮೂದಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಶಾನಮಂಗಲದ ಬಳಿ ಶುದ್ಧಿ: ಹರಿಯುವ ನೀರನ್ನು ಶುದ್ಧಿಕರಿಸಲು ಸಾಧ್ಯವಿಲ್ಲವಾದ್ದರಿಂದ ಬೈರಮಂಗಲ ಕೆರೆಗೆ ನದಿ ನೀರು ಸೇರುವ ಸ್ಥಳವಾದ ಶಾನಮಂಗಲದ ಬಳಿ ನೀರನ್ನು ಬಂಡ್ ನಿರ್ಮಿಸಿ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಅಲ್ಲಿ ನದಿ ನೀರನ್ನು ಶುದ್ಧೀಕರಿಸಲಾಗುವುದು ಎಂದು ಅವರು ವಿವರಿಸಿದರು.  ಶುದ್ಧೀಕರಣಕ್ಕೆ ಸುಮಾರು 48 ರಿಂದ 72 ಗಂಟೆಗಳ ಅಗತ್ಯವಿದೆ. ಶುದ್ಧೀಕರಣಗೊಂಡು ತಿಳಿಯಾದ ನೀರನ್ನು ಆಸುಪಾಸಿನ ಕೆರೆಗಳು, ನದಿ ಮೂಲಕ ಬೆಳೆಗಳಿಗೆ ಉಪಯೋಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀರಾಮರೆಡ್ಡಿ ಹೇಳಿದರು.
ಸಂಪೂರ್ಣ ಕಲುಷಿತ: ಬೈರಮಂಗಲ, ಶಾನಮಂಗಲ, ಶೇಷಗಿರಿಹಳ್ಳಿ ಸೇರಿದಂತೆ ವೃಷಭಾವತಿ ನದಿ ಹರಿವಿನಿಂದ ಪರಿಸರ ನೈರ್ಮಲ್ಯ ಹದಗೆಟ್ಟಿದೆ. ಮರ, ಗಿಡ ಮಾತ್ರವಲ್ಲದೆ ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೂ ಮಾರಕವಾಗಿದೆ. ಅಂತರ್ಜಲ ಕಲುಷಿತವಾಗಿದ್ದು, ಭೂಮಿಯೂ ವಿಷಯುಕ್ತವಾಗಿದೆ ಎಂದರು.
ಈ ಭಾಗದಲ್ಲಿ ಬೆಳೆಯುತ್ತಿರುವ ತರಕಾರಿ ಸಹಿತ ಎಲ್ಲ ಬೆಳೆಗಳು ವಿಷಯುಕ್ತವಾಗಿವೆ. ಅಮೃತವೆನಿಸಿದ ಹಸುವಿನ ಹಾಲು, ಕುರಿ, ಮೇಕೆ ಮಾಂಸದ ಮೇಲೂ ಪರಿಣಾಮ ಬೀರಿದೆ. ಪರಿಸರವಾದಿಗಳ ಮನವಿ ಹಾಗೂ ಲೋಕಾ ಅದಾಲತ್ ನ್ಯಾಯಮೂರ್ತಿಗಳ ನಿರ್ದೇಶನದಂತೆ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಮಾರಕ ಅಂಶಗಳು: ನದಿ ನೀರಿನಲ್ಲಿನ ವಿಷಯುಕ್ತ ಆಮ್ಲ ಹಾಗೂ ಲವಣಾಂಶಗಳಿಂದ ಬೈರಮಂಗಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೇಲೆ ದುಷ್ಪರಿಣಾಮ ಆಗುತ್ತಿದೆ. ವೃಷಭಾವತಿ ನದಿ ನೀರು, ಬೈರಮಂಗಲ ಕೆರೆಯಿಂದ ಹೆಚ್ಚುತ್ತಿರುವ ಸೊಳ್ಳೆಗಳ ಹಾವಳಿ ತಪ್ಪಿಸಬೇಕು. ಮುಚ್ಚಿ ಹೋಗಿರುವ ಎಸ್ಪಿಆರ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಿರುವ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬ ಸ್ಥಳೀಯರ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಜಿಲ್ಲಾಧಿಕಾರಿ ಜತೆ ಉಪ ವಿಭಾಗಾಧಿಕಾರಿ ಡಾ.ಎಂ.ಎನ್.ರಾಜೇಂದ್ರಪ್ರಸಾದ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಾಲ್ಯಾ ನಾಯಕ್, ಜಂಟಿ ಕಣಷಿ ನಿರ್ದೇಶಕ ಅಣ್ಣಯ್ಯ, ತೋಟಗಾರಿಕೆ  ಉಪ ನಿರ್ದೇಶಕ ಡಾ.ಬಿ.ಕೃಷ್ಣ, ರೇಷ್ಮೆ ಉಪ ನಿರ್ದೇಶಕ ರೆಡ್ಡಿ, ತಹಸೀಲ್ದಾರ್ ಹನುಮಂತರಾಯಪ್ಪ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆಧಿಕಾರಿ ನಾರಾಯಣಸ್ವಾಮಿ, ಸಣ್ಣ ನೀರಾವರಿ ಎಇಇ ರವಿಶಂಕರ್, ಜಲವಾಹಿನಿ ಸಂಸ್ಥೆ ಸುರೇಶ್ ಇತರರಿದ್ದರು.


10 ಬಿಎಂಡಿಗೆ ಇಳಿಕೆ
ತಮ್ಮ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನ ಕಲುಷಿತ ನೀರನ್ನು ಶುದ್ಧೀಕರಿಸುತ್ತಿದ್ದು, ಶುದ್ಧೀಕರಿಸುವ ಮುನ್ನ ನೀರಿನಲ್ಲಿರುವ ಕಲುಷಿತ ಮಟ್ಟವು 230 ಬಿಎಂಡಿಗಿಂತ ಅಧಿಕವಾಗಿದ್ದು, ಶುದ್ಧೀಕರಣದಲ್ಲಿ 10 ಬಿಎಂಡಿಗೆ ಇಳಿಸಲಾಗುತ್ತಿದೆ ಎಂದು ಮೈಸೂರಿನ ಜಲವಾಹಿನಿ ಮೇನೇಜ್ಮೆಂಟ್ ಸರ್ವೀಸಸ್ ಸಂಸ್ಥೆಯ ತಾಂತ್ರಿಕ ವ್ಯವಸ್ಥಾಪಕ ಉಮಾಶಂಕರ್ ವಿವರಣೆ ನೀಡಿದರು.ವೃಷಭಾವತಿ ನದಿ ನೀರಿನಲ್ಲಿ ಕಾರ್ಖಾನೆಗಳ ವಿಷಯುಕ್ತ ವಸ್ತುಗಳು ಅದರಲ್ಲೂ ಆರ್ಸೆನಿಕ್ ಹೆಚ್ಚಾಗಿದೆ ಎಂದರು.



ದೂರಿನ ಮಳೆ
ಬೈರಮಂಗಲ ಕೆರೆ ನಿರ್ಮಾಣ ಕಾಮಗಾರಿಯನ್ನು 1940ರಲ್ಲಿ ಪ್ರಾರಂಭಿಸಿ 1942ರಲ್ಲಿ ಪೂರ್ಣಗೊಳಿಸಲಾಗಿದೆ. ಸುಮಾರು 25 ವರ್ಷಗಳ ಹಿಂದಿನವರೆಗೂ ಈ ಕೆರೆ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ಇದೀಗ ಕಲುಷಿತಗೊಂಡು ಇದರ ಹಾವಳಿಯಿಂದ ಬದುಕಲಾಗುತ್ತಿಲ್ಲ ಎಂದು ಗ್ರಾಮಸ್ಥ ಹೊನ್ನಪ್ಪ ದೂರಿದರು. ಕಾಂಗ್ರೆಸ್ ಮುಖಂಡ ಎ.ಮಂಜುನಾಥ್, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಬೈರಮಂಗಲ ಗ್ರಾಮ ಪಂಚಾಯಿತಿ ಸದಸ್ಯ ರವೀಶ್, ತಿಮ್ಮೇಗೌಡನದೊಡ್ಡಿ ಕಿರಣ್ಬಾಬು, ಬಸವರಾಜು, ನಾಗರಾಜು ಸೇರಿದಂತೆ ಸ್ಥಳೀಯರನೇಕರು ಜಿಲ್ಲಾಧಿಕಾರಿ ನೇತೃತ್ವದ ತಂಡಕ್ಕೆ ದೂರುಗಳ ಸುರಿಮಳೆಗರೆದರು.


ವೃಷಭಾವತಿ ಮತ್ತಷ್ಟು ಕಲುಷಿತ
ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಮಲ, ಮೂತ್ರ, ತ್ಯಾಜ್ಯ ಸಹಿತ ಕಲುಷಿತ ನೀರು ಹರಿಯುವ ವೃಷಭಾವತಿ ನದಿಗೆ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯವೂ ಸೇರಿ ಹರಿಯುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಶುಕ್ರವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡಕ್ಕೆ ನದಿಯಿಂದಾಗುತ್ತಿರುವ ಅವಾಂತರದ ದರ್ಶನವನ್ನು ಸ್ಥಳೀಯರು ಮಾಡಿಸಿದ್ದಾರೆ.  ಬಿಬಿಎಂಪಿ ಗಡಿಯಂಚಿನಲ್ಲಿರುವ ಮತ್ತು ಬಿಡದಿ ಭಾಗದ ಭಾರಿ, ಸಣ್ಣ ಕೈಗಾರಿಕೆ ಘಟಕಗಳು ತ್ಯಾಜ್ಯವನ್ನು ಶುದ್ಧೀಕರಿಸದೆ ವೃಷಭಾವತಿ ನದಿಗೆ ಬಿಡುತ್ತಿವೆ. ಇದರಿಂದ ಮತ್ತಷ್ಟು ಪರಿಸರ ಮಾಲಿನ್ಯ ಉಂಟಾಗುತ್ತಿರುವುದನ್ನು ಸಾರ್ವಜನಿಕರು ಸಾಕ್ಷಿ ಸಮೇತ ಅಧಿಕಾರಿಗಳ ತಂಡದ ಗಮನಕ್ಕೆ ತಂದರು. ಅಂತಹ ಕಾರ್ಖಾನೆಗಳನ್ನು ತಕ್ಷಣ ತೆರವುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement