ಸ್ನೇಹಿತನನ್ನೇ ಹತ್ಯೆ ಮಾಡಿದ್ದ ಏಳು ಆರೋಪಿಗಳ ಬಂಧನ
ಬೆಂಗಳೂರು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸ್ನೇಹಿತನನ್ನೇ ಹತ್ಯೆ ಮಾಡಿದ್ದ ಏಳು ಮಂದಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿನಯ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತಗವಿಪುರ ಗುಟ್ಟಳ್ಳಿ ನಿವಾಸಿ ಪ್ರದೀಪ್ (26), ಕೆ.ಜಿ. ನಗರದ ಎಂ. ಮಂಜುನಾಥ್(23), ಕೆ. ಅಜಯ್ಕುಮಾರ್(24), ವಾಟರ್ ಟ್ಯಾಂಕ್ ರಸ್ತೆಯ ಮಂಜುನಾಥ್(22), ಶ್ರೀನಗರದ ಶಿವರಾಜ(19), ಬಾಪೂಜಿನಗರದ ದೀಪು(23) ಹಾಗೂ ಗಣೇಶ(19) ಎಂಬುವರನ್ನು ಬಂಧಿಸಲಾಗಿದೆ.
ಈ ಏಳು ಮಂದಿ ಆರೋಪಿಗಳು ಜೂ.16ರಂದು ರಾತ್ರಿ ಹನುಮಂತನಗರದ ನಿವಾಸಿ ವಿನಯ್ ಎಂಬುವವರನ್ನು ಮುನೇಶ್ವರನಗರದ ಎಂಎಲ್ಇ ಶಾಲೆ ಬಳಿ ಹತ್ಯೆ ಮಾಡಿದ್ದರು.
ಸ್ಕೂಟರ್ ಚಾಲನೆ ಮಾಡುವ ವಿಷಯದಲ್ಲಿ ಪ್ರದೀಪ್, ಗಣೇಶ್ ಹಾಗೂ ವಿನಯ್ ನಡುವೆ ಜಗಳವಾಗಿತ್ತು. ಈ ವಿಚಾರವಾಗಿ ಆರೋಪಿಗಳು ಮಾರಕಾಸ್ತ್ರಗಳಿಂದ ಇರಿದು ವಿನಯ್ನನ್ನು ಹತ್ಯೆ ಮಾಡಿದ್ದರು.
ಆರೋಪಿಗಳು ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಬಳಿ ಸಿಕ್ಕಿಬಿದ್ದಿದ್ದಾರೆ.
ಗಿರಿನಗರ ಠಾಣೆಯ ಪಿಐ ಬಿ.ಎಸ್. ಶ್ರೀನಿವಾಸ್, ಪಿಎಸ್ಐ ಕೆ. ಸುಬ್ರಮಣಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.