ಜು.12ರಿಂದ ಕರ್ನಾಟಕ ಛಾಯಾಗ್ರಾಹಕರ ಸಂಘದ ವಿನೂತನ ವಸ್ತು ಪ್ರದರ್ಶನ
ರಾಮನಗರ: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘವು ಜು.12ರಿಂದ 14ರವರೆಗೆ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಡಿಜಿ ಇಮೇಜ್ 2013 ವಿನೂತನ ವಸ್ತು ಪ್ರದರ್ಶನ ಏರ್ಪಡಿಸಿದೆ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ನಾಗೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಯಾಚಿತ್ರ ಗ್ರಾಹಕರ ಅಭ್ಯುದಯಕ್ಕಾಗಿ ಸ್ಥಾಪಿಸಲಾಗಿರುವ ಕಲ್ಯಾಣ ನಿಧಿಗೆ ಹಣ ಸಂಗ್ರಹಿಸುವ ದೃಷ್ಟಿಯಿಂದ ಈ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಲ್ಲಿವರೆಗೂ ಖಾಸಗಿ ಸಂಸ್ಥೆಗಳು ಮಾತ್ರ ವಸ್ತು ಪ್ರದರ್ಶನ ನಡೆಸುತ್ತಿದ್ದವು. ಆದರೆ ಪ್ರಥಮ ಬಾರಿಗೆ ಸಂಘದಿಂದಲೇ ವಸ್ತು ಪ್ರದರ್ಶನ ನಡೆಸಲಾಗುತ್ತಿದೆ. ಆಲ್ ಇಂಡಿಯಾ ಫೋಟೋಗ್ರಾಫಿಕ್ ಟ್ರೇಡ್ ಇಂಡಸ್ಟ್ರಿ ಅಸೋಸಿಯೇಷನ್ ಸಹ ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದೆ. ವಿವಿಧ ಕಂಪನಿಗಳ ಡಿಜಿಟಲ್ ಕ್ಯಾಮೆರಾ, ಫೋಟೋಗ್ರಫಿಗೆ ಬೇಕಾದ ಉಪಕರಣಗಳು, ಪ್ರಿಂಟಿಂಗ್ ಉಪಕರಣಗಳು ಸೇರಿದಂತೆ ಎಲ್ಲಾ ರೀತಿಯ ಛಾಯಾಚಿತ್ರ ಸಂಬಂಧಿ ಉಪಕರಣಗಳನ್ನು ಮಾರಾಟ ಹಾಗೂ ಪ್ರದರ್ಶನದ ಜತೆಗೆ ಆಸಕ್ತರಿಗೆ ಅನುಕೂಲವಾಗಲೆಂದು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಛಾಯಾ ಚಿತ್ರಗಾರರ ಸಂಘಟನೆಯನ್ನು ಬಲ ಪಡಿಸುವ ದೃಷ್ಟಿಯಿಂದ ಹೋಬಳಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಛಾಯಾ ಚಿತ್ರಗ್ರಾಹಕರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೆ ಸಂಘದ ಸದಸ್ಯರ ಸಂಖ್ಯೆ ಐದು ಸಾವಿರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುವುದು ಎಂದು ಸಂಘದ ನಿರ್ದೇಶಕ ರವಿಕುಮಾರ್ ತಿಳಿಸಿದರು..ವೃತ್ತಿ ಛಾಯಗ್ರಾಹಕರಿಗೆ ಮಾತ್ರವಲ್ಲದೆ ಹವ್ಯಾಸಿ ಛಾಯಾಗ್ರಾಹಕರಿಗೂ ಈ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವ ಸಮುದಾಯ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿ ಪಡೆಯಬಹುದು ಎಂದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಉಮಾಶಂಕರ್, ರವಿ, ಶ್ರೀನಿವಾಸ್, ಸುರೇಶ್, ರಾಮು, ವೆಂಕಟೇಶ್, ನಾಗೇಶ್ ಗೌಡ, ಪ್ರದೀಪ್, ನಾರಾಯಣ ಕುಮಾರ್ ಮತ್ತಿತರರು ಹಾಜರಿದ್ದರು.