ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಗರಸಭೆ ಚುಕ್ಕಾಣಿಗಾಗಿ ಜೆಡಿಎಸ್, ಕಾಂಗ್ರೆಸ್ ಕಸರತ್ತು

Rashmi Kasaragodu
Updated On : 23 Jun 2013, 1:05 am

 ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜೂ.22
ಅತಂತ್ರವಾಗಿರುವ ರಾಮನಗರ ನಗರಸಭೆ ಚುಕ್ಕಾಣಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಸರತ್ತಿಗೆ ಇಳಿದಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿ ವಿಷಯವಾಗಿ ಕಾಂಗ್ರೆಸ್ ಮುಖಂಡರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಅಸಮಾಧಾನದ ಹೊಗೆಯಾಡುತ್ತಿದೆ.
ನಗರಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೂ ಕಾಂಗ್ರೆಸ್‌ಗೆ ಬಹುಮತ ಸಿಗಲಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗೆದ್ದು ಬೀಗಿದರು. ಇದೀಗ ಉಭಯ ಪಕ್ಷಗಳು ಪೌರ ಸಂಸ್ಥೆ ಆಡಳಿತ ವಶಕ್ಕೆ ತೆರೆಮರೆ ಕಸರತ್ತು ನಡೆಸುತ್ತಿವೆ.
ಕಾಂಗ್ರೆಸ್ ಸದಸ್ಯರು ತಮಗೆ ಅನುಕೂಲ ಆಗುವಂತಹ ಮೀಸಲನ್ನೇ ನಿಗದಿ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಇನ್ನಿಲ್ಲದ ಲಾಬಿಗೆ ಇಳಿದಿದ್ದಾರೆ. ಮೀಸಲು ಬೇಡಿಕೆ ಸಲ್ಲಿಸುವ ಹಂತದಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನರಾಗ ಕೇಳಿ ಬರುತ್ತಿದ್ದು, ಎಡವಟ್ಟಿಗೆ ಆಹ್ವಾನದ ಸಂಕೇತವಾಗಿದೆ.
ಮೀಸಲು ಕಗ್ಗಂಟು: ರಾಮನಗರದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೂಲಕ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲು ನಿಗದಿ ಮಾಡಿಸುವಲ್ಲಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಲಾಬಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದಿದ್ದ ಶಿವಕುಮಾರ್ ಅವರೀಗ ಸಚಿವ ಸ್ಥಾನವೂ ಸಿಗದೆ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಪೌರ ಸಂಸ್ಥೆಗಳ ಮೀಸಲು ನಿಗದಿಯಲ್ಲಿ ಅವರ ಮಾತಿಗೆ ಸಹಜವಾಗಿಯೇ ಮನ್ನಣೆ ನೀಡಲಾಗಿದೆ.
ಈ ಮಧ್ಯೆ, ಕಾಂಗ್ರೆಸ್ ಪ್ರಭಾವಿ ನಾಯಕರೊಬ್ಬರು ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಇಲ್ಲವೇ ಹಿಂದುಳಿದ ಬ ವರ್ಗಕ್ಕೆ ಮೀಸಲು ಮಾಡಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಮುಖಂಡರ ನಡುವಿನ ಈ ಭಿನ್ನಾಭಿಪ್ರಾಯದಿಂದ ಸದಸ್ಯರಲ್ಲೂ ಗೊಂದಲವೇರ್ಪಟ್ಟಿದೆ.
ಸೇರಿಗೆ ಸವ್ವಾ ಸೇರು: ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾದಲ್ಲಿ ಅಧ್ಯಕ್ಷ ಸ್ಥಾನದ ಕನಸು ಹೊತ್ತ ಸದಸ್ಯ ಈಗ ತನಗೆ ವ್ಯತಿರಿಕ್ತ ಮೀಸಲು ನಿಗದಿಯಾದರೆ ಮತದಾನದಂದು ಕೈ ಕೊಡುವ ಬಹಿರಂಗವಾಗಿಯೇ ಬೆದರಿಕೆ ಒಡ್ಡುತ್ತಿರುವುದು ಕಾಂಗ್ರೆಸಿಗರಿಗೆ ಬಿಸಿ ತುಪ್ಪವಾಗಿದೆ.
ಇದೇ ಅಭಿಪ್ರಾಯವನ್ನು ಅನ್ಯ ಮೀಸಲು ಬಯಸಿರುವ ಸದಸ್ಯರೂ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಪಾಲಿಗೆ ಮೀಸಲು ನಿಗದಿಯೇ ಮಗ್ಗಲು ಮುಳ್ಳಾಗುವ ಆತಂಕವನ್ನು ತಂದೊಡ್ಡಿದೆ. ಈ ಕಾರಣಕ್ಕೆ ಕೈ ಪಾಳಯ ಕಂಗಾಲಾಗಿದೆ.
ನಿರ್ಣಾಯಕ ನಡೆ: ರಾಮನಗರ ನಗರಸಭೆಯಲ್ಲಿ ವರಿಷ್ಠರ ಸ್ಥಾನಗಳ ಚುನಾವಣೆಗೆ ಇಬ್ಬರು ಶಾಸಕರು ಸೇರಿದಂತೆ 33 ಮತದಾರರಿದ್ದಾರೆ. ಕಾಂಗ್ರೆಸ್ 16 ಸದಸ್ಯ ಬಲದೊಂದಿಗೆ ಅತಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ಪಕ್ಷೇತರ ರಫೀಕ್, ಶಾಸಕರಾದ ಕುಮಾರಸ್ವಾಮಿ, ಅಪ್ಸರ್ ಆಗ ಸೇರಿದಂತೆ ಜೆಡಿಎಸ್ ಸದಸ್ಯ ಬಲ 15.
ಬಿಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದು, ಅವರೇ ಈಗ ನಿರ್ಣಾಯಕರಾಗಿದ್ದಾರೆ. ಬಿಜೆಪಿ ಸದಸ್ಯರು ಪಕ್ಷ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಿದವರಲ್ಲ. ವ್ಯಕ್ತಿಗತವಾಗಿ ಬೆಂಬಲದ ಇರಾದೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಗರಸಭೆ ಕದನ ಕುತೂಹಲ ಕೆರಳಿಸಿದೆ.
ಜೆಡಿಎಸ್ ಗಾಳ: ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜೆಡಿಎಸ್ ಸದ್ದಿಲ್ಲದೆ ಪ್ರತಿತಂತ್ರ ಹೂಡುವಲ್ಲಿ ನಿರತವಾಗಿದೆ. ಕಳೆದ ಬಾರಿ ಸ್ವಪಕ್ಷೀಯರು ಸೃಷ್ಟಿಸಿದ ಅರಾಜಕತೆಯ ಕಾರಣಕ್ಕೆ ಕುಮಾರಸ್ವಾಮಿ ಇಲ್ಲಿ ಅಧಿಕಾರ ರಚನೆಗೆ ಹೆಚ್ಚೇನೂ ಆಸಕ್ತಿ ವಹಿಸುತ್ತಿಲ್ಲ.
ಆದರೆ, ನೆಚ್ಚಿನ ನಾಯಕನನ್ನು ಮೆಚ್ಚಿಸುವ ಉದ್ದೇಶದಿಂದ ಸ್ಥಳೀಯ ಮುಖಂಡರು ಮತ್ತು ಸ್ಥಾನಾಕಾಂಕ್ಷಿ ಸದಸ್ಯರು ಅನ್ಯ ಪಕ್ಷಗಳ ಸದಸ್ಯರಿಗೆ ಗಾಳ ಹಾಕುವುದಕ್ಕೆ ಹೊರಟಿದ್ದಾರೆ. ಕುದುರೆ ವ್ಯಾಪಾರದ ಗುಸು ಗುಸು ಕೇಳಿ ಬಂದಿದ್ದು, ಮೀಸಲು ನಿಗದಿ ಬಳಿಕ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.  
ಚನ್ನಪಟ್ಟಣದಲ್ಲಿ ಅಚ್ಚರಿ ಬೆಳವಣಿಗೆ
ಚನ್ನಪಟ್ಟಣದಲ್ಲಿ ಕಾಂಗ್ರೆಸಿ ಚಿನ್ಹೆಯಡಿ ಪುರಪಿತೃಗಳಾದ 13 ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸಿ.ಪಿ.ಯೋಗೇಶ್ವರ್ ಪರ ದುಡಿದಿದ್ದರು. ಇದೀಗ ಯು ಟರ್ನ್ ತೆಗೆದುಕೊಂಡು, ಕಾಂಗ್ರೆಸ್‌ಗೆ ನಿಷ್ಠೆ ಅಚಲ ಎಂದಿರುವ ಹಿಂದೆ ಸ್ವಹಿತಾಸಕ್ತಿಯ ಉದ್ದೇಶವಲ್ಲದೆ ಬೇರೇನೂ ಇಲ್ಲ.
ಹದಿನಾಲ್ಕು ವರ್ಷದ ರಾಜಕೀಯ ಜೀವನದುದ್ದಕ್ಕೂ ಯೋಗೇಶ್ವರ್ ವೈಯಕ್ತಿಕವಾಗಿ ತಮ್ಮ ಚುನಾವಣೆಗೆ ನೀಡುವಷ್ಟು ಒತ್ತನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಷಯದಲ್ಲಿ ನೀಡಿದವರಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೀಸಲು ನಿಗದಿ ಮತ್ತು ಬೆಂಬಲಕ್ಕೆ ಡಿ.ಕೆ.ಶಿವಕುಮಾರ್ ಬೇಕೇ ಬೇಕು.
ಚನ್ನಪಟ್ಟಣದಲ್ಲಿ ಸಮಾಜವಾದಿ ಪಕ್ಷದ ಪಡಸಾಲೆಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪುರಪಿತೃಗಳು ಮೀಸಲು ಲಾಬಿಗಾಗಿ ಶಿವಕುಮಾರ್ ಮೊರೆ ಹೋಗಿದ್ದರು. ಕಾಂಗ್ರೆಸ್‌ಗೆ ನಿಷ್ಠೆ ಎನ್ನುವ ಬಹಿರಂಗ ಸಂದೇಶ ಬಾರದ ಹೊರತು ಮನ್ನಣೆ ಇಲ್ಲವೆಂದು ಶಿವಕುಮಾರ್ ಸ್ಪಷ್ಟಪಡಿಸಿದ್ದರು.
ಈ ಕಾರಣದಿಂದ ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ 13 ಪುರಪಿತೃಗಳು ತಾವೆಲ್ಲ ಕಾಂಗ್ರೆಸಿಗರೆನ್ನುವ ಸಂದೇಶ ನೀಡಿದ್ದಾರೆ. ಅಲ್ಲೂ ಹಗ್ಗ ಜಗ್ಗಾಟ ಮುಂದುವರೆದಿದೆ. ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಪಕ್ಷೇತರರಲ್ಲದೆ ಯೋಗೇಶ್ವರ್ ಅಭಯವೂ ಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement