ಯಾತ್ರಿ ನಿವಾಸ್ ನಿರ್ಮಾಣಕ್ಕೆ ಅಗತ್ಯ ಕ್ರಮ: ಶಾಸಕ
ಮಾಗಡಿ: ತಾಲೂಕಿನ ಪುರಾತಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಬಳಿ ಯಾತ್ರಿ ನಿವಾಸ್ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಪ್ರಸಿದ್ಧ ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಇದೊಂದು ಪುರಾತನ ದೇವಾಲಯ. ಈ ದೇವಾಲಯಕ್ಕೆ ಸಹಸ್ರಾರು ವರ್ಷದ ಇತಿಹಾಸವಿದೆ. ಇಲ್ಲಿಗೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದಲ್ಲೂ ಅಸಂಖ್ಯಾತ ಭಕ್ತರಿದ್ದಾರೆ. ಭವರೋಗ ನಿವಾರಕ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂಬ ಚಿಂತನೆಯಿಂದ ಇಲ್ಲೊಂದು ಯಾತ್ರಿ ನಿವಾಸ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ತಾಲೂಕು ಮುಜರಾಯಿ ಅಧಿಕಾರಿಗಳಾದ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಇದೇ ವೇಳೆ ದೇವಾಲಯ ಶಿಥಲವಾಗಿದ್ದು, ದೇವಾಲಯವನ್ನು ದುರಸ್ಥಿಪಡಿಸಬೇಕು. ಮೂಲಭೂತ ಸೌಕರ್ಯ ಕಲ್ಪಿಸಬೇಕು. ದೇವಾಲಯಕ್ಕೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಿ, ವಸತಿ ರಹಿತ ಅರ್ಚಕರಿಗೆ ವಸತಿ ನೀಡುವಂತೆ ಶಾಸಕರಲ್ಲಿ ಅರ್ಚಕರು ಮನವಿ ಮಾಡಿಕೊಂಡರು. ದೇವಾಲಯದ ಮೂಲಭೂತ ಸಮಸ್ಯೆಗಳನ್ನು ಆಲಿಸಿ ತಹಸೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ದೇವಾಲಯದ ಅರ್ಚಕರು, ಇತರೆ ಮುಖಂಡರು ಹಾಜರಿದ್ದರು.