ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆನೆ ಹಿಂಡಿನ ಕೋಪಕ್ಕೆ ಪತ್ರಕರ್ತ ಬಲಿ

Rashmi Kasaragodu
Updated On : 24 Jun 2013, 12:59 pm

ಕ.ಪ್ರ.ವಾರ್ತೆ ಟಿ ಸೂಲಿಬೆಲೆ ಟಿ ಜೂ.23
ಫೋಟೋ ತೆಗೆಯಲು ಮರ ಹತ್ತಿ ಕುಳಿತ ವರದಿಗಾರನೊಬ್ಬನನ್ನು ಆನೆಗಳ ಹಿಂಡು ತುಳಿದು ಸಾಯಿಸಿದ ದಾರುಣ ಘಟನೆ ಹೊಸಕೋಟೆ ತಾಲೂಕಿನ ಓರೋಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಮೈಲಾಪುರ ನಿವಾಸಿ ಮಂಜುನಾಥ (22) ಆನೆಗಳ ತುಳಿತಕ್ಕೆ ಬಲಿಯಾದ ನತದೃಷ್ಟ ಯುವಕ ಎಂದು ಗುರುತಿಸಲಾಗಿದೆ. ಮೈಲಾಪುರ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಹರ ಸಹಾಸ ಪಡುತ್ತಿದ್ದು, ಸ್ಥಳದಲ್ಲಿ ಜಮಾಯಿಸಿರುವ ಸುತ್ತಮುತ್ತಲಿನ ಜನಸ್ತೋಮದಿಂದ ಓಡಿಸುವ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಸದ್ಯ ಜಡಿಗೇನಹಳ್ಳಿ ಫಾರೆಸ್ಟ್‌ನಲ್ಲಿ ಆನೆಗಳು ಠಿಕಾಣಿ ಹೂಡಿವೆ ಎಂದು ಸ್ಥಳೀಯರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಏನಾಯಿತು: ಹೊಸಕೋಟೆ ತಾಲೂಕು ಗಡಿ ಭಾಗದ ಮಾಲೂರು ಕಡೆಯಿಂದ ವಲಸೆ ಬಂದಿರುವ ತಮಿಳುನಾಡಿನ ಮೂಗನೂರು  ಅರಣ್ಯದ 15 ಆನೆಗಳ ಹಿಂಡು ಶನಿವಾರ ಮಾಲೂರು ತಾಲೂಕಿನ ಕಾಟೇರಿ ಸೊಣ್ಣಹಳ್ಳಿ ಗ್ರಾಮದಲ್ಲಿ ಮುನಿಯಲ್ಲಪ್ಪ ಎಂಬ ಕುರಿಗಾಯಿನ್ನು ಬಲಿ ತೆಗೆದುಕೊಂಡು ನಾಲ್ವರನ್ನು ಗಾಯಗೊಳಿಸಿದ್ದವು. ಸಿಕ್ಕ ಸಿಕ್ಕ
ತೋಟಗಳನ್ನು ಹಾಳು ಮಾಡಿ ಹೊಸಕೋಟೆಯತ್ತ ಧಾವಿಸಿದ ಆನೆಗಳ ಹಿಂಡು ತಾಲೂಕಿನ ಗಡಿ ಭಾಗದ ಓರೋಹಳ್ಳಿ, ಇಂಜನಹಳ್ಳಿ, ಅಪ್ಪಸಂದ್ರ, ತಗ್ಗಲಿ ಹೊಸಹಳ್ಳಿ, ಚಿಕ್ಕತಗ್ಗಲಿ, ಮೈಲಾಪುರ ಇತ್ಯಾದಿ ಕಡೆ ಸುತ್ತಾಡಿದ್ದು ಭಾನುವಾರ ಬೆಳಿಗ್ಗೆ ತಗ್ಗಲಿ ಹೊಸಹಳ್ಳಿಯಲ್ಲಿ ಕಾಣಸಿಕೊಂಡಿವೆ. ಅಲ್ಲಿಂದ ಸುಮಾರು 250 ರಿಂದ 300 ಎಕರೆಯಷ್ಟು ವಿಸ್ತಾರ ಹೊಂದಿರುವ ಓರೋಹಳ್ಳಿ ಸುತ್ತಮುತ್ತಲಿನ ಅರಣ್ಯ ಹಾಗೂ ಕೆರೆ ಪ್ರದೇಶಕ್ಕೆ ಧಾವಿಸಿದ ಆನೆಗಳ ಹಿಂಡು ಓರೋಹಳ್ಳಿ ಕೆರೆಯಲ್ಲಿ ಅಗಾಧವಾಗಿರುವ ಬಿದುರು ಸೊಪ್ಪನ್ನು ತಿನ್ನಲು  ಬಂದಾಗ ಯುವಕ ಬಲಿಯಾಗಿದ್ದಾನೆ.
ಮರಹತ್ತಿದ್ದ: ಆನೆಗಳ ಹಿಂಡು ಬಂದಿರುವ ಸುದ್ದಿ ತಿಳಿದ ಮೈಲಾಪುರ ನಿವಾಸಿ ಮಂಜುನಾಥ ಬಿದುರು ಸೊಪ್ಪು ತಿನ್ನುತ್ತಿದ್ದ ಕೆರೆಯ ಅಂಗಳಕ್ಕೆ ಧಾವಿಸಿದ್ದಾನೆ. ಈ ವೇಳೆಯಲ್ಲಿ ಬೆರಳಣಿಕೆಯಷ್ಟು ಮಂದಿ ಸಾರ್ವಜನಿಕರು,ನಾಲ್ವರು ಅರಣ್ಯ ಇಲಾಖೆಯವರು ಮಾತ್ರ ಇದ್ದರು ಎನ್ನಲಾಗಿದೆ. ಈ ವೇಳೆ ಹತ್ತಿರದಿಂದ ಆನೆಗಳ ಪೋಟೋ ತೆಗೆಯಲು ಹೊಂಗೆ ಮರ ಏರಿದ ಮಂಜುನಾಥನನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆಯುವ  ಪ್ರಯತ್ನ ಮಾಡಿಲ್ಲ.
ಹೊಂಗೆ ಮರದಲ್ಲಿ ಪೋಟೋ ಕ್ಲಿಕ್ಕಿಸುತ್ತಿದ್ದಂತೆ ಹತ್ತಿರದಲ್ಲಿಯೇ ಇದ್ದ ಆನೆಗಳ ಹಿಂಡು ಕೆರಳಿದವು. ಮರದ ಹತ್ತಿರ ಬಂದು ಕೊಂಬೆಯನ್ನು ಅಲ್ಲಾಡಿಸಿ ಮೇಲಿದ್ದ ಮಂಜುನಾಥನನ್ನು ಕೆಡವಿ ತುಳಿದು ಕೊಂದು ಹಾಕಿದವು ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.
ಪೇಪರ್ ಬಾಯ್ ಕನ್ನಡ ದಿನ ಪತ್ರಿಕೆಯನ್ನು ಮನೆ ಮನೆಗೆ ಹಂಚುವ ಕಾರ್ಯ ಮಾಡುತ್ತಿದ್ದ ಮಂಜುನಾಥ
ಸ್ಥಳೀಯ ಸುದ್ದಿಗಳನ್ನು ಪತ್ರಿಕೆಯೊಂದಕ್ಕೆ ಕಳುಹಿಸುತ್ತಿದ್ದ. ಆನೆಗಳ ಹಿಂಡು ಬಂದ ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಾರದೆ ನಿರ್ಲಕ್ಷ್ಯ ಮಾಡಿದರು. ಗಡಿ ಭಾಗ ಪ್ರವೇಶಿಸುತ್ತಿದ್ದಂತೆ ಆನೆಗಳನ್ನು ಒಡಿಸುವ ಕಾರ್ಯ ಮಾಡಬೇಕಿತ್ತು. ಅಲ್ಲದೇ ಮಂಜುನಾಥನನ್ನು ಸ್ಥಳಕ್ಕೆ ತೆರಳದಂತೆ ಎಚ್ಚರಿಸಬಹುದಿತ್ತು.
ಇವರ  ನಿರ್ಲಕ್ಷ್ಯದಿಂದಲೇ ವ್ಯಕ್ತಿ ಬಲಿಯಾಗಲು ಕಾರಣವಾಯಿತು ಎಂದು ಸ್ಥಳೀಯರು ದೂರಿದ್ದಾರೆ. ಸದ್ಯ ಆನೆಗಳನ್ನು ಜಡಿಗೇನಹಳ್ಳಿ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿರುವ ಸಿಬ್ಬಂದಿ ಅಲ್ಲಿಂದ ತಮಿಳುನಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಲ್ಲಿಕಾರ್ಜುನ್ ಸೇರಿದಂತೆ ಹಿರಿಯ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement