ಕನ್ನಡ ಭಾಷೆ ಪೋಷಿಸುವುದು ನಮ್ಮ ಕರ್ತವ್ಯ
ಕ.ಪ್ರ.ವಾರ್ತೆ ಆನೇಕಲ್ ಜೂ.23
ಎರಡು ಸಹಸ್ರ ವರ್ಷಗಳ ಇತಿಹಾಸ ವಿರುವ ಶ್ರೀಮಂತ ಕನ್ನಡ ಬಾಷೆಯನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ. ಸೋಮಶೇಖರ್ ತಿಳಿಸಿದ್ದಾರೆ.
ಅವರು 7ನೆಯ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಣ್ಣ ಬಸವಣ್ಣ, ಕವಿ ಕುವೆಂಪು ಹಾಗೂ ಅನೇಕ ದಾರ್ಶನಿಕರ ಭಾವನೆಗಳನ್ನು ತಿಳಿಸಿ ಅವರಿಂದ ಸಮಾಜ ಯಾವ ರೀತಿ ಉದ್ಧಾರವಾಯಿತು ಎಂಬುದನ್ನು ವಿವರಿಸಿದರು.
ಅಗ್ರಸ್ಥಾನ: ವಿಶ್ವದ 30 ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಅಗ್ರ ಸ್ಥಾನ ಪಡೆದಿದೆ. ಆದಿ ಕವಿ ಪಂಪನಿಂದ ಇತ್ತೀಚಿನ ಕವಿ ಪುಂಗವರು ಪಡೆದ ಶ್ರೇಷ್ಠ ಬಿರುದುಗಳು ಕನ್ನಡ ಸಾಹಿತ್ಯ ಸತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿರುವ ಕನ್ನಡ ಭಾಷೆಯನ್ನು ಚೆನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕಾಸ್ಮೋಪಾಲಿಟನ್ ಹೆಸರಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರನ್ನು ಹುಡುಕಬೇಕಾದ ಪರಿಸ್ಥಿತಿ ಇರುತ್ತದೆ. ಆದರೇ ಕನಿಷ್ಠ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡುವುದು ಉತ್ತಮ ಎಂದರು.
ಕೇಂದ್ರ ಕನ್ನಡ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ ಡಾ. ಸಂಧ್ಯಾರೆಡ್ಡಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಸಂತಸದ ವಿಷಯ. ಆಕೆ ಜಾನಪದ ಸಾಹಿತ್ಯದಲ್ಲಿ ನಡೆಸಿದ ಸಂಶೋಧನೆ ಹಾಗೂ ಗ್ರಂಥ ರಚನೆ ಶ್ರೇಷ್ಠ ಸಾಹಿತ್ಯವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಸಮಸ್ಯೆಗಳೂ ಪ್ರಚಾರ ಪಡೆಯಬೇಕಿದೆ. ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದರೂ ಮಹಿಳೆಯರಿಗೆ ಆದ್ಯತೆ ನೀಡಿರುವುದು ಸಮಾನತೆ ಎಂಬ ಪದಕ್ಕೆ ಅರ್ಥ ನೀಡಿದಂತಾಗಿದೆ ಎಂದರು.
ಸನ್ಮಾನ: ಸಮಾಜದ ವಿವಿಧ ಸ್ಥರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಎರಡೂ ದಿನಗಳ ಕಾರ್ಯಕ್ರಮದಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೀರಿಸುವ ರುಚಿಕಟ್ಟಾದ ಊಟವೂ ಇದ್ದಿತು. ಜಿಲ್ಲಾ ಮಟ್ಟದ ಸಾಹಿತಿಗಳು ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.