ಕಲುಷಿತ ನೀರು ಪೂರೈಕೆ
ಕೃಷ್ಣರಾಜಪುರ: ಇಲ್ಲಿ ಪೂರೈಕೆ ಮಾಡುವ ಕಾವೇರಿ ನೀರು ಸಂಪೂರ್ಣ ಕಲುಷಿತವಾಗಿದ್ದು, ರೋಗ-ರುಜಿನಗಳು ಹರಡುವ ಭೀತಿ ನಾಗರಿಕರನ್ನು ಕಾಡುತ್ತಿದೆ.
ಬಹು ವರ್ಷಗಳ ಕನಸು ನನಸಾದ ಸಂತಸದಲ್ಲಿದ್ದ ಸಾರ್ವಜನಿಕರು, ಜಲ ಮಂಡಳಿ ಬೇಜವಾಬ್ದಾರಿತನದಿಂದ ಕಂಗಾಲಾಗಿದ್ದಾರೆ. ಕುಡಿಯಲು ಕಾವೇರಿ ನೀರು ಉಪಯೋಗಿಸುತ್ತಿರುವ ಜನತೆ ಸಾಂಕ್ರಾಮಿಕ ರೋಗಗಳು ಬರಬಹುದು ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ವಾರಕ್ಕೊಮ್ಮೆ, ವಾರಕ್ಕೊಮ್ಮೆ ದರ್ಶನ ನೀಡುವ ಕಾವೇರಿ ನೀರನ್ನು ಹಿಡಿಯಲು ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಭಾನುವಾರ ಬೆಳಗಿನ ಜಾವ ಕ್ಷೇತ್ರದ ರವೀಂದ್ರ ಬಡಾವಣೆ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಪೂರೈಕೆ ಮಾಡಿದ ನೀರು ಕಲುಷಿತವಾಗಿದೆ. ಕೋಳಿ ಪುಕ್ಕ, ಹುಳಗಳು ನೀರಿನಲ್ಲಿ ಕಂಡುಬರುತ್ತಿವೆ. ಆತಂಕಗೊಂಡ ಸಾರ್ವಜನಿಕರು ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಸ್ಪಂದನೆ ಮಾತ್ರ ಸಿಕ್ಕಿಲ್ಲ. ಜಲಮಂಡಳಿ ಅಧಿಕಾರಿಗಳಿಗೆ ಹಿಡಿ ಶಾಪಹಾಕುತ್ತಿದ್ದಾರೆ. ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.