ಕಾಂಪೌಂಡ್ ಕುಸಿದು ಬಾಲಕ ಸಾವು
ರಾಮನಗರ: ನಿರ್ಮಾಣ ಹಂತದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟು 3 ಮಂದಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಲಕ್ಕಸಂದ್ರ ಗ್ರಾಮದ ಜಯರಾಮ್ ಎಂಬುವರ ಪುತ್ರ ಭರತ್ ಗೌಡ(6) ಮೃತಪಟ್ಟ ಬಾಲಕ. ಗೋಪಾಲ್ ಎಂಬುವರಿಗೆ ಸೇರಿರುವ ನಿರ್ಮಾಣ ಹಂತದಲ್ಲಿದ್ದ ಗೋಡೆ ಬಳಿ ನಿಂತಿದ್ದ ಸಂದರ್ಭದಲ್ಲಿ ಗೋಡೆ ಕುಸಿದಿದೆ. ಇದರಿಂದ ಭರತ್ ಗೌಡ ಸ್ಥಳದಲ್ಲೇ ಮೃತಪಟ್ಟರೆ ಗೋಪಾಲ್, ಕೋಮಲ ಹಾಗೂ ಜ್ಯೋತಿ ಎಂಬುವರು ಗಾಯಗೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಹಕ್ಕು ಪತ್ರ ವಿತರಣೆ
ರಾಮನಗರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಕನಕಪುರ ತಾಲೂಕಿನ ಟಿ ಬೇಕುಪ್ಪೆ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿ ತಂತ್ರಜ್ಞಾನ ಅಳವಡಿಸಿ ನಿರ್ಮಿಸಲಾಗಿರುವ ಮನೆಗಳ ಉದ್ಘಾಟನೆ ಮತ್ತು ಹಕ್ಕು ಪತ್ರ ವಿತರಣಾ ಕಾರ್ಯಕ್ರಮವು ಜೂ.24ರಂದು ನಡೆಯಲಿದೆ. ವಸತಿ ಸಚಿವ ಡಾ.ಎಂ.ಎಚ್.ಅಂಬರೀಷ್ ಮನೆಗಳನ್ನು ಉದ್ಘಾಟಿಸುವರು. ಶಾಸಕ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ರೋಟರಿ ಗವರ್ನರ್ ಆರ್.ಬಿ. ಬದರಿಪ್ರಸಾದ್, ಜಯ ಶಿವಶಕ್ತಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ನ ಜೆ. ಮಹೇಶ್ವರಿ, ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಯಾದವ್ ಮತ್ತಿತರರು ಭಾಗವಹಿಸುವರು.