ದೇವಾಲಯ ಅಭಿವೃದ್ಧಿಗೆ ಆದ್ಯತೆ ನೀಡಿ: ಲಕ್ಷ್ಮಿ
ವಿಜಯಪುರ: ನಮ್ಮ ಸಂಸ್ಕೃತಿಯ ಪ್ರತೀಕವಾದ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಲಕ್ಷ್ಮಿ ತಿಳಿಸಿದರು. ಪಟ್ಟಣದ ದೇವಾಲಯಗಳ ವಸ್ತು ಸ್ಥಿತಿಯ ವೀಕ್ಷಣೆಗೆ ಇತ್ತೀಚೆಗೆ ಭೇಟಿ ನೀಡಿದ ಅವರು ದೇವಾಲಯಗಳ ಧಾರ್ಮಿಕ ಚಟುವಟಿಕೆಗಳನ್ನು ಪರಿಶಿಲೀಸಿ ಮಾತನಾಡಿದರು. ಪಟ್ಟಣದ ಸಂತೆ ಮೈದಾನದ ವೇಣುಗೋಪಾಲ ಸ್ವಾಮಿ ದೇವಾಲಯ, ಸೌಮ್ಯಚನ್ನಕೇಶವ ಸ್ವಾಮಿ ದೇವಾಲಯ, ಮೂಡಲಾಂಜನೇಯಸ್ವಾಮಿ ದೇವಾಲಯಗಳಿಗೆ ಭೇಡಿ ನೀಡಿ ಪರಿಶೀಲನೆ ನಡೆಸಿದ ಅವರು ವ್ಯವಸ್ಥಾಪಕ ಸಮಿತಿಯ ಎಲ್ಲಾ ಸದಸ್ಯರು ಸೇರಿ ದೇವಾಲಯದ ಆಗು ಹೋಗುಗಳ ಬಗ್ಗೆ ತೀರ್ಮಾನ ಕೈಗೊಂಡು ತಿಂಗಳಿಗೊಮ್ಮೆ ಸಭೆ ನಡೆಸಿ ನಡವಳಿಕೆಗಳನ್ನು ದಾಖಲಿಸಬೇಕಾಗಿ ಸೂಚಿಸಿದರು.
ದೇವಾಲಯದ ಕುಂದು ಕೊರತೆಗಳು, ಆಸ್ತಿ ವಿವರಗಳ ಬಗ್ಗೆ ಪ್ರತಿ ದೇವಾಲಯಗಳು ಮಾಹಿತಿ ನೀಡಬೇಕು. ಹುಂಡಿ ಹಣವನ್ನು ದೇವಾಲಯದ ಅಭಿವೃದ್ಧಿ ಕಾರ್ಯಗಳಲ್ಲಿ ಬಳಸಿದ ನಿಖರ ಲೆಕ್ಕ ಪತ್ರದ ದಾಖಲೆ ನೀಡಬೇಕು ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ದೇವಾಲಯದ ಅರ್ಚಕರ ನೇಮಕಾತಿ ಅರ್ಜಿಗಳನ್ನು ಸ್ವೀಕರಿಸಿದರು.