ಪಾರಿವಾಳ ಗುಟ್ಟದ ರಸ್ತೆಗೆ ಕಲ್ಲಿಟ್ಟು ಪ್ರತಿಭಟನೆ
ದೇವನಹಳ್ಳಿ: ದೇವನಹಳ್ಳಿ ಹೊರವಲಯದಲ್ಲಿರುವ ಪಾರಿವಾಳ ಗುಟ್ಟದಲ್ಲಿರುವ ಪುರಾತನ ಗುಹೆಯೊಳಗಿರುವ ಹಿಂದೂ ದೇವರ ದರ್ಶನಕ್ಕೆ ಭಕ್ತರು ಹೋಗಿಬರಲು ಜೈನ ಸಂಸ್ಥೆಯವರು ತಡೆಗೋಡೆ ನಿರ್ಮಿಸಿದ್ದು ಜಿಲ್ಲಾಧಿಕಾರಿಗಳ ಹಾಗೂ ಉಪ ವಿಭಾಗಾಧಿಕಾರಿಗಳ ಸೂಚನೆ ಮೇರೆಗೂ ತಡೆಗೋಡೆಯನ್ನು ತೆರವುಗೊಳಿಸದೇ ಇದ್ದ ಕಾರಣದಿದಾಗಿ ದೇವನಹಳ್ಳಿಯ ಸಂಘ ಸಂಸ್ಥೆಗಳ ನಾಗರಿಕರು, ದೇವಾಲಯದ ಭಕ್ತರು ಸೇರಿ ಭಾನುವಾರ ಗುಟ್ಟದ ರಸ್ತೆಗೆ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದರು.
ಸ್ಥಳದಲ್ಲಿಯೇ ಪೆಂಡಾಲ್ ಹಾಕಿ ಬೆಳಗ್ಗೆ 11 ಗಂಟೆಯಿಂದ ಮೂರು ಗಂಟೆಗಳ ಕಾಲ ಪ್ರತಿಭಟಿಸಿದರು.
ಪಾರಿವಾಳ ಗುಟ್ಟದ ಸರ್ವೆ ನಂ. 157 ರಲ್ಲಿ 30.09 ಎಕರೆ ಪ್ರದೇಶವನ್ನು 1999 ರಲ್ಲಿ ಜಿಲ್ಲಾಧಿಕಾರಿಗಳು ಸಿದ್ದಾಚಲ ಸ್ಥೂಲಭದ್ರ ಧಾಮ ಶಾಸನ ಪ್ರಭಾವಕ ಟ್ರಸ್ಟ್ನವರಿಗೆ ಷರತ್ತುಗಳನ್ನು ಉಲ್ಲೇಖಿಸಿ ದೇವಸ್ಥಾನ, ಕಣ್ಣಿನ ಆಸ್ಪತ್ರೆ, ಧರ್ಮಶಾಲಾ ಹಾಗೂ ಶಾಲೆಗಳನ್ನು ನಿರ್ಮಿಸಲು ಉಚಿತವಾಗಿ ನೀಡಿದ್ದಾರೆ. ಆದರೆ ಮಂಜೂರಿಯಾದ ಸರ್ವೆ ನಂಬರಿನಲ್ಲಿ ಪುರಾತನ ಗುಹೆಯೊಳಗೆ ವೀಭದ್ರಸ್ವಾಮಿ , ಗಣೇಶ ಮತ್ತು ಗವೀ ಬೀರಲಿಂಗೇಶ್ವರಸ್ವಾಮಿ ದೇವರುಗಳಿದ್ದು ಬಹಳ ಹಿಂದಿನ ಕಾಲದಿದಲೂ ಭಕ್ತರು ಆಗಮಿಸಿ ಪ್ರತಿವಾರ ಪೂಜೆ ಸಲ್ಲಿಸುತ್ತಿದ್ದರು.
ಆದೇಶ ಉಲ್ಲಂಘನೆ: ಸದ್ಯದ ಪರಿಸ್ಥಿತಿಯಲ್ಲಿ ಜೈನ ಸಂಸ್ಥೆಯವರು ಈ ಪುರಾತನ ದೇವಾಲಯಕ್ಕೆ ತೆರಳಲು ತಡೆಗೋಡೆ ನಿರ್ಮಿಸಿದ್ದು ಹಲವಾರು ಬಾರಿ ತಹಸೀಲ್ದಾರರಿಗೆ, ಉಪವಿಭಾಗಾಧಿಕಾರಿಗಳಿಗೆ ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು ಈ ಜಾಗದಲ್ಲಿ ಯಾವುದೇ ಕಾಮಗಾರಿ ಮಾಡಬಾರದೆಂದು ಆದೇಶ ನೀಡಿದ್ದರು.
ಆದರೂ ತಡೆಗೋಟೆ ಕಾರ್ಯ ಮಾಡಿದ ಕಾರಣದಿದಾಗಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆಯಾದ ಕಾರಣದಿದಾಗಿ ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ತಿಳಿಸಿದರು.
ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರ ಪರವಾಗಿ ಹಸಿರು ಸೇನೆ ಅಧ್ಯಕ್ಷ ಹರೀಶ್, ಸಿ.ಮುನಿರಾಜು, ಚಂದ್ರಶೇಖರ್, ಅಂಬರೀಶ್, ಸಿ. ಭಾಸ್ಕರ್, ಪಿ.ರವಿಕುಮಾರ್ ಮಾತನಾಡಿದರು.
ಜೈನ ಸಮುದಾಯದ ಇಲ್ಲಿನ ಗುರೂಜಿಗಳಾಗಿದ್ದ ದಕ್ಷಿಣ ಕೇಸರಿ ಆಚಾರ್ಯ ಶ್ರೀ ಸ್ಥಾಲಭದ್ರ ಸೂರೀಶ್ವರ್ಜೀ ಅವರ 11 ನೆ ಪುಣ್ಯ ಸ್ಮರಣೆ ಅಂಗವಾಗಿ ಜೈನ ದೇವಾಲಯಗಳ ವೀಕ್ಷಣೆ ಹಾಗೂ ಆಚಾರ್ಯ
ಚಂದ್ರಯಶ್ ಸೂರೀಶ್ವರ್ಜೀ ಅವರ ಉಪನ್ಯಾಸ ಮತ್ತು ಆಶೀರ್ವಾದ ಪಡೆಯಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಜೈನ ಭಕ್ತರು ಭಾನುವಾರ ಪಾರಿವಾಳ ಗುಟ್ಟಕ್ಕೆ ಆಗಮಿಸಿದ್ದರು.
ಅಧಿಕಾರಿಗಳ ಆದೇಶ ಪಾಲಿಸುತ್ತೇವೆ:: ಪ್ರತಿಭಟನೆಕಾರರ ಬಳಿ ಪೊಲೀಸ್ ಅಧಿಕಾರಿಗಳೊಂದಿಗೆ ಜೈನ ಸಂಸ್ಥೆಯ ಆಡಳಿತ ಮಂಡಳಿಯ ಪ್ರಕಾಶ್ ಜೀ ಅವರು ಆಗಮಿಸಿ ನಾವು ಪಟ್ಟಣದ ಭಕ್ತರ ವಿರೋಧ ಕಟ್ಟಿಕೊಂಡು ಏನನ್ನು ಮಾಡಲು ಸಾಧ್ಯವಿಲ್ಲ.
ಅಲ್ಲದೆ ಅಧಿಕಾರಿಗಳ ಆದೇಶವನ್ನು ಪಾಲಿಸುತ್ತೇವೆ ಎಂದು ತಿಳಿಸಿದರು. ಅಷ್ಟರಲ್ಲಿಯೆ ಎಸಿಪಿ ನಾಯಕ್ ಅವರು ಆಗಮಿಸಿ ನಿಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಇಲ್ಲಿಗೆ ಆಗಮಿಸಿ ಬಗೆಹರಿಸಲಿದ್ದಾರೆ. ಆದ್ದರಿಂದ ರಸ್ತೆಯನ್ನು ತೆರವುಗೊಳಿಸಿ ಎಂದು ಹೇಳಿದಾಗ ಪ್ರತಿಭಟನಾಕಾರರು ವಾಪಸಾದರು.