ಪಾರಿವಾಳ ಗುಟ್ಟದಲ್ಲಿ ಕಣ್ಣಿನ ಆಸ್ಪತ್ರೆ ಪ್ರಾರಂಭೋತ್ಸವ
ದೇವನಹಳ್ಳಿ: ದೇವನಹಳ್ಳಿ ಹೊರವಲಯದಲ್ಲಿರುವ ಪಾರಿವಾಳ ಗುಟ್ಟದಲ್ಲಿ ದಕ್ಷಿಣ ಕೇಸರಿ ಆಚಾರ್ಯ ಸ್ಥೂಲಭದ್ರ ಸೂರೀಶ್ವರ್ಜೀ ಅವರ 11ನೆಯ ಪುಣ್ಯ ಸ್ಮರಣೆಯ ಅಂಗವಾಗಿ ಶ್ರೀ ಸ್ಥೂಲಭದ್ರ ಕೃಪಾ ಶ್ರೀ ಚಂದ್ರ ಯಶ್ ಸೂರೀಶ್ವರ್ಜೀ ಅಂಧತ್ವ ನಿವಾರಣಾ ಕಣ್ಣಿನ ಆಸ್ಪತ್ರೆಯ ಪ್ರಾರಂಭೋತ್ಸವ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಆಚಾರ್ಯ ಚಂದ್ರಯಶ್ ಸೂರೀಶ್ವರ್ಜೀ ಅವರ ಸಾನಿಧ್ಯದಲ್ಲಿ ಕಣ್ಣಿನ ರೋಗಿ ನಾರಾಯಣಪ್ಪ ಭಾನುವಾರ ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಆಚಾರ್ಯ ಚಂದ್ರಯಶ್ ಸೂರೀಶ್ವರ್ಜೀ ಅವರು ಮಾತನಾಡಿ ದೇವನಹಳ್ಳಿ ಮತ್ತು ತಾಲೂಕಿನ ಯಾವುದೇ ಗ್ರಾಮೀಣ ಪ್ರದೇಶದಲ್ಲಿರುವ ಕಣ್ಣಿನ ತೊಂದರೆ ಇರತಕ್ಕವರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ ನಡೆಸಿ ಅಗತ್ಯವಾದವರಿಗೆ ಬೆಂಗಳೂರಿನ ಡಾ.ಸೋಲಂಕಿ ಆಸ್ಪತ್ರೆಯಲ್ಲಿ ಕಣ್ಣಿನ
ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಲ್ಲ ರೋಗಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಂತರ ವಾಪಸ್ ಕರೆದುಕೊಂಡು ಬರಲಾಗುವುದು ಎಂದರಲ್ಲದೆ ಪ್ರತಿವರ್ಷ 1100 ಮಂದಿಗೆ ನೇತ್ರ ಚಿಕಿತ್ಸೆ ಮಾಡಿಸುವ ಗುರಿಹೊಂದಲಾಗಿದೆ ಎಂದರು.
ಈ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ವೆಚ್ಚಕ್ಕಾಗಿ ಪ್ರಕಾಶ್ಜಿ ರಾಥೋಡ್, ಚಂಪಾಲಾಲ್ ಬಫ್ನ, ಪ್ರಕಾಶ್ಚಂದ್ ಕೊಠಾರಿ, ಶಿಕಾರಿಪುರ ಸೂರಜ್ಮಲ್ ಶಿವಾನಿ ಹಾಗೂ ಶಾಂತಿನಗರ ಜೈನ ಸಂಸ್ಥೆಯವರು ತಲಾ 1 ಲಕ್ಷ 11 ಸಾವಿರ ರು.ಗಳನ್ನು ದೇಣಿಗೆಯಾಗಿ ನೀಡಲಿದ್ದಾರೆ ಎಂದು ಸ್ವಾಮೀಜಿಗಳು ತಿಳಿಸಿದರು.