ಬಿಎಂಟಿಸಿ ಡಿಕ್ಕಿ ಬೈಕ್ ಸವಾರ ಸಾವು
ಆನೇಕಲ್ಲು: ಗೆಳೆಯರ ಜೊತೆ ಕ್ರಿಕೆಟ್ ಆಡಿಕೊಂಡು ಜಯನಗರಕ್ಕೆ ತೆರಳುತ್ತಿದ್ದ ಬೈಕ್ ಸವಾರನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ನಡೆದಿದೆ. ಅವಿನಾಶ್ (24) ಮೃತ ಪಟ್ಟ ಯುವಕ. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ ಅವಿನಾಶ್ 3 ದಿನಗಳ ಹಿಂದೆ ಹೊಸ ಬೈಕ್ ಕೊಂಡಿದ್ದ. ಭಾನುವಾರ ಗೆಳೆಯರ ಜೊತೆ ಕ್ರಿಕೆಟ್ ಆಡಿ ನಂತರ ಮನೆಗೆ ಬಂದ ಅವಿನಾಶ್ ಬೆಂಗಳೂರಿಗೆ ತೆರಳಲು ಬಂದಾಗ ಘಟನೆ ನಡೆದಿದ್ದು ಕೆರಳಿದ ಗ್ರಾಮಸ್ಥರು ಬಸ್ಸಿಗೆ ಕಲ್ಲನ್ನು ತೂರಿ ಕಿಟಕಿ ಗಾಜುಗಳನ್ನುಪುಡಿ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹುಳಿಮಾವು ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: ಬೆಂಗಳೂರು ಏರ್ಪೋರ್ಟ್, ಕೆಎಸ್ಟಿಡಿಸಿ ಪ್ರಿಪೇಯ್ಡ್ ಟ್ಯಾಕ್ಸಿ ಡ್ರೈವರ್ಸ್ ವೆಲ್ಫೇರ್ ಅಸೋಸಿಯೇಷನ್ಗೆ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಿತು. ಸಂಘದ ಸ್ಥಾಪಕ ಅಧ್ಯಕ್ಷರಾದ ಎಚ್. ವೆಂಕಟೇಶ ರೆಡ್ಡಿ ಅವಿರೋಧವಾಗಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘದ ಉಳಿದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೃತ್ಯೋತ್ಸವ
ಬೆಂಗಳೂರು: ಕರ್ನಾಟಕ ನೃತ್ಯ ಕಲಾ ಪರಿಷತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಶಾಸ್ತ್ರೀಯ ನೃತ್ಯೋತ್ಸವ ನಡೆಸುತ್ತಿದ್ದು, 2013 ಅಂಕುರ ಯುವ ನೃತ್ಯೋತ್ಸವನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮ ನೀಡಲು ಇಚ್ಛಿಸುವ 20ರಿಂದ 30ರ ವಯೋವುತಿಯಲ್ಲಿರುವ ಭರತನಾಟ್ಯ, ಕೂಚುಪುಡಿ, ಕಥಕ್, ಒಡಿಸ್ಸಿ, ಮೋಹಿನಿ ಆಟ್ಟಂ ಕಲಾವಿದರು ತಮ್ಮ ಸಾಧನೆ, ಪರಿಚಯ ಪತ್ರದ ಜತೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಗುರು ಪ್ರಮಾಣಿತ ಅರ್ಹತಾ ಪತ್ರ, ತಮ್ಮ ಇತ್ತೀಚಿನ ಕಾರ್ಯಕ್ರಮದ ಸಿ.ಡಿ, ಭಾವಚಿತ್ರಗಳ ಜತೆಗೆ ಜೂ. 30ರೊಳಗೆ ಕಳುಹಿಸಿಕೊಡಬೇಕು. ವಿಳಾಸ: ಶಾರದಾ ಸ್ತ್ರೀ ಸಮಾಜ, ಗಾಂಧಿ ಭವನದ ಎದುರು, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು- 560 001. ದೂ: 9844089035.
ಅರ್ಜಿ ಆಹ್ವಾನ
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಿಂದ 2013-14ನೇ ಸಾಲಿಗೆ ಡಿಪ್ಲೊಮಾ ಸಿನಿಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ದಿನಾಂಕ ವಿಸ್ತರಿಸಲಾಗಿದೆ. ಅರ್ಜಿಗಳನ್ನು ಪ್ರಾಂಶುಪಾಲರ ಕಚೇರಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಅಂಚೆ, ಬೆಂಗಳೂರು-560088 ಇಲ್ಲಿಂದ 300ನ್ನು ಖುದ್ದಾಗಿ ಪಾವತಿಸಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ 28466768 ಸಂಪರ್ಕಿಸಬಹುದು.