ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಆನೆ ದಾಳಿಯಿಂದ ಮಡಿದವರಿಗೆ ಪರಿಹಾರ'

Rashmi Kasaragodu
Updated On : 25 Jun 2013, 12:40 pm

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಹಾಗೂ ಮಾಲೂರು ಸಮೀಪ ಆನೆ ದಾಳಿಯಿಂದ ಮೃತಪಟ್ಟವರಿಗೆ ಸೂಕ್ತ ಪರಿಹಾರ ಧನ ನೀಡಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆ ಹಾವಳಿ ನಡೆಯುತ್ತಿದ್ದರೂ, ಇದುವರೆಗೆ ಪ್ರತಿಕ್ರಿಯೆಗೆ ನೀಡದೇ ಇದ್ದ ರಮಾನಾಥ್ ರೈ, ಮಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದು, ವಾರ್ತಾ ಇಲಾಖೆ ಮೂಲಕ ಪರಿಹಾರ ಭರವಸೆಯ ಪ್ರಕಟಣೆ ಹೊರಡಿಸಿದ್ದಾರೆ. ತಮಿಳುನಾಡಿನ ಹೊಸೂರು ಅರಣ್ಯ ವಿಭಾಗದ ಬೆರಕೆ ಗ್ರಾಮದ ಕಡೆಯಿಂದ ಸುಮಾರು 4-5 ವಾರದ ಹಿಂದೆ ಕರ್ನಾಟಕದ ಕೋಲಾರ ವಿಭಾಗದ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ನೀಲಗಿರಿ ನೆಡುತೋಪು ಮತ್ತು ಅರಣ್ಯ ಪ್ರದೇಶದಲ್ಲಿ ಹಿಂಡಾಗಿ ಚಲಿಸುತ್ತಿರುವ ಆನೆಗಳನ್ನು ಚದುರಿಸಲು ಪ್ರಯತ್ನ ನಡೆಸಲಾಗುತ್ತಿದೆ. ಆದರೆ, 2-3 ದಿನದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಆನೆಗಳನ್ನು ನೋಡಲು ಹೋಗಿದ್ದರಿಂದ ಗಾಬರಿಗೊಂಡ ಆನೆಗಳು ನಡೆಸಿದ ದಾಳಿಗೆ ಚಿಕ್ಕಮುನಿಯಪ್ಪ (60), ರಾಮಕೃಷ್ಣಪ್ಪ (55), ಚಂದ್ರಪ್ಪ (42) ಎಂಬುವರು ಮೃತಪಟ್ಟಿದ್ದಾರೆ. ಹೊಸಕೋಟೆ ಗ್ರಾಮದ ಮಂಜುನಾಥ ಎಂಬುವರು ಸಾವನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ವರ್ತನೆಯಿಂದ ಆನೆಗಳು 2-3 ಗುಂಪುಗಳಲ್ಲಿ ಚಲಿಸಲು ಆರಂಭಿಸಿವೆ. ಹಿರಿಯ ಅಧಿಕಾರಿಗಳ ಜತೆಗೆ ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕರು ಗುಂಪಾಗಿ ಆನೆಗಳ ಹಿಂಡಿನತ್ತ ಹೋಗಬಾರದು. ಅವುಗಳನ್ನು ಕೆಣಕಬಾರದು. ಪರಿಸ್ಥಿತಿ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement