ಮರಳು ದಂಧೆ ಮೇಲೆ ದಾಳಿ: ರು. 1.80 ಲಕ್ಷ ದಂಡ
ಮಾಗಡಿ: ಕಳೆದ ಮೂರು ದಿನಗಳಿಂದ ಅಕ್ರಮ ಮರಳು ಫಿಲ್ಟರ್ ದಂಧೆಯ ಮೇಲೆ ಕಾರ್ಯಾಚರಣೆ ನಡೆಸಿದ್ದು, ಸುಮಾರು 1.80 ಲಕ್ಷ ರು. ದಂಡ ವಿಧಿಸಿರುವುದಾಗಿ ತಹಸೀಲ್ದಾರ್ ಡಾ. ಬಿ. ಆರ್. ಹರೀಶ್ ನಾಯಕ್ ತಿಳಿಸಿದರು. ಅವರು ಸುದ್ದಿಗಾರರೊಂದಿಗೆ ಮಾತನ್ಘಾಜಿ, ತಾಲೂಕಿನ ಚೌಡಿಬೇಗೂರು, ಬಿಸ್ಕೂರು, ಬೆಳಗುಂಬ, ಮಣಿಗನಹಳ್ಳಿ, ಚೀಲೂರು, ತಮ್ಮೇನಹಳ್ಳಿ ಕೆರೆ ಸುತ್ತಮುತ್ತಲು ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಸೋಲೂರು ಹೋಬಳಿ ಹೊಸೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡು 30 ಸಾವಿರ ರು. ಗಳಿಗೆ ಟಿಎಪಿಸಿಎಂಎಸ್ಗೆ ಹರಾಜು ಮಾಡಲಾಯಿತು ಎಂದರು. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಕೆಲ ಸಂಸ್ಥೆಗಳು ಮರಳು ಸಾಗಾಣಿಕೆಗೆಯನ್ನು ಲೀಸ್ ಪಡೆದಿದ್ದು, ಸರ್ಕಾರದಿಂದ ಪರ್ಮಿಟ್ ಪಡೆದ ಬಹುತೇಕ ಲಾರಿಗಳು ಅಲ್ಲಿಂದ ಮರಳನ್ನು ಲಾರಿಗಳಲ್ಲಿ ತುಂಬಿಕೊಂಡು ಈ ಮಾರ್ಗವಾಗಿ ಚಲಿಸುತ್ತಿರುತ್ತವೆ. ಪರ್ಮಿಟ್ ಇರುವುದರಿಂದ ನಾವು ಅವುಗಳನ್ನು ಹಿಡಿಯುವುದಿಲ್ಲ, ಅಕ್ರಮ ಮರಳು ಸಾಗಾಣಿಕೆ ಮಾಡುವ ಲಾರಿಗಳನ್ನು ಹಿಡಿದು ದಂಡ ವಿಧಿಸುತ್ತೇವೆ. ಅಕ್ರಮವಾಗಿ ಸಾಗಿಸುತ್ತಿದ್ದ 10 ಮರಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಧರ್ಮೇಗೌಡ ಅವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ತಹಸೀಲ್ದಾರ್ ವಿವರಿಸಿದರು.