ಶಿಕ್ಷಕರ ಸಂಘಕ್ಕೆಸಿ. ರಾಜಶೇಖರ್ ಅವಿರೋಧ ಆಯ್ಕೆ
ರಾಮನಗರ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಚನ್ನಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಸಿ.ರಾಜಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಆರ್.ಕೆ.ಬೈರಲಿಂಗಯ್ಯ ಅವರು ಮುಂಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಸಭೆಯಲ್ಲಿ ರಾಜಶೇಖರ್ ಅವಿರೋಧ ಆಯ್ಕೆ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾಯಗಾನಹಳ್ಳಿ ಶಾಲೆ ಶಿಕ್ಷಕ ಎಂ.ಎನ್.ದೇವರಾಜು ಆಯ್ಕೆಗೊಂಡರು. ಸಭೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ಮಂಜುನಾಥ್, ಖಜಾಂಚಿ ಬಿ.ಆರ್.ರಾಜಶೇಖರ್, ಸಂಘಟನಾ ಕಾರ್ಯದರ್ಶಿ ಲಿಂಗರಾಜು, ಉಪಾಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಸಿ.ವಿ.ಜಯಣ್ಣ, ಎಚ್.ಶ್ರೀನಿವಾಸ್, ನಾರಾಯಣ, ಪ್ರಭುದೇವರು, ಬಿ.ಜಿ.ಪುಟ್ಟಸ್ವಾಮಿ, ಶಿವಶಂಕರ್ ಮುಂತಾದವರು ಭಾಗವಹಿಸಿದ್ದರು.
ನಾಯಕತ್ವದ ಗುಣ ಬೆಳೆಸಿಕೊಳ್ಳಿ: ಸಿರಿಲ್ಕುಮಾರ್
ನೆಲಮಂಗಲ: ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಲಾ ಪ್ರಾಂಶುಪಾಲ ಡಾ. ಸಿರಿಲ್ಕುಮಾರ್ ಹೇಳಿದರು. ಅವರು ಸೋಮವಾರ ಪಟ್ಟಣದ ಥಾಮಸ್ ಮೆಮೋರಿಯಲ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 2013-14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಗಳ ನಾಯಕತ್ವದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಒಬ್ಬರು ಮತ್ತೊಬ್ಬರ ಅಭಿವೃದ್ಧಿಗೆ ಸಹಕರಿಸಿ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಿಲ್ಡೆನೋಲ್ ವಹಿಸಿದ್ದರು. ನೂತನವಾಗಿ ಶಾಲಾ ಗುಂಪುಗಳಿಗೆ ನಾಯಕರಾಗಿ ಆಯ್ಕೆಯಾದ ಕೆಂಪುವೃಂದದ ನಾಯಕಿಯಾಗಿ ಮೇಘಾ.ಎಚ್, ನೀಲಿ ವೃಂದದ ನಾಯಕಿಯಾಗಿ ಮಂಜುಳಾ.ಎಸ್, ಶಾಲಾ ನಾಯಕ ತೇಜಸ್.ಎಸ್.ಜಿ, ಉಪನಾಯಕಿ ನಿಷಾತಬೇಗಂ, ಶಾಲಾ ಶಿಕ್ಷಣ ನಾಯಕ ಕುಮಾರ ಜಯಂತ್ ಸೇರಿದಂತೆ ಹಲವು ವಿಭಾಗಗಳಿಗೆ ನೂತನವಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಶಾಲಾ ಉಪಾಧ್ಯಕ್ಷ ಗ್ರೇಗ್ಡುನ್ಕಾನ್, ಶಾಲಾ ಶಿಕ್ಷಕರು, ಪೋಷಕರು ಇದ್ದರು.