ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂಘಟನೆಗೆ ಮಹತ್ವದ ಶಕ್ತಿಯಿದೆ: ಸಿದ್ಧಲಿಂಗ ಶ್ರೀ

Rashmi Kasaragodu
Updated On : 25 Jun 2013, 12:53 pm

ಕ.ಪ್ರ.ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಜೂ.24
ಆಧುನಿಕ ಸಮಾಜದಲ್ಲಿ ಸಂಘಟನೆಗೆ ಮಹತ್ವದ ಶಕ್ತಿ ಇದೆ. ಸಂಘಟನೆಯಿಂದ ಮಾತ್ರ ಯಾವುದೇ ಕಾರ್ಯ ಸಾಧಿಸಲು ಸಾಧ್ಯ. ಇಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ ಎಂದು ಸಿದ್ಧಗಂಗಾ ಕ್ಷೇತ್ರದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಬಸವ ಭವನದಲ್ಲಿ ನಡೆದ ಅವರು ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮುದಾಯವನ್ನು ಗೌರವದಿಂದ ಕಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಈ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ನೌಕರರ ಸಂಘದ ಏಳಿಗೆಗೆ ಸಹಕಾರಿಯಾಗಲಿದೆ. ಸಮಾಜದ ಐಕ್ಯತೆ ಸಾಧಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. 12ನೇ ಶತಮಾನದಲ್ಲಿ ವಚನಕಾರರು ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಗೌರವಿಸುವ ಮೂಲಕ ವೀರಶೈವ ಧರ್ಮ ಸ್ಥಾಪಿಸಿದ ಆದರ್ಶ ನಮ್ಮದಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ ಎಲ್ಲರನ್ನೂ ಸಮಾನವಾಗಿ ಗೌರವಿಸುವುದನ್ನು ಕಲಿಸಿದ ಧರ್ಮ ವೀರಶೈವ ಧರ್ಮ. ಸಂಘದ ಸದಸ್ಯರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಂಘದ ಅಭ್ಯುದಯಕ್ಕೆ ನಗರದಲ್ಲಿ ಸೂಕ್ತ ನಿವೇಶನ ನೀಡಲಾಗುವುದು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಿವೃತ್ತ ಎಸಿಪಿ ಲೋಕೇಶ್ವರ್ ಮಾತನಾಡಿ, ಲಿಂಗಾಯಿತ ಸಮುದಾಯದಲ್ಲಿರುವ ಎಲ್ಲ ಒಳಪಂಗಡಗಳು ಬೇರೆ ಎನ್ನುವ ಮನೋಭಾವ ಮರೆತು ಸಂಘಟಿತರಾಗಬೇಕು. ನೌಕರರು ತಮ್ಮ ಆದಾಯದಲ್ಲಿ ಕನಿಷ್ಠ ಭಾಗವನ್ನಾದರೂ ಸಮುದಾಯದ ಏಳಿಗೆಗೆ ಮೀಸಲಿಡಬೇಕು. ಇದರಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಇತರರು ಉನ್ನತ ಸ್ಥಾನಗಳಿಗೆ ಬರಲು ಸಹಕಾರಿಯಾಗಲಿದೆ. ನೌಕರರ ಸಂಘ ಸಭೆ ಸಮಾರಂಭಗಳಿಗಷ್ಟೇ ಸೀಮಿತವಾಗದೆ ರಚನಾತ್ಮಕ ಕೆಲಸಗಳನ್ನು ಮಾಡುವಂತಾಗಬೇಕು ಎಂದರು.
ಕವನ ಸಂಕಲನ ಬಿಡುಗಡೆ: ಇದೇ ಸಂದರ್ಭದಲ್ಲಿ ಸಿ.ಎ.ಚಂದ್ರಶೇಖರಯ್ಯ ಅವರ ಮಧುರ  ನುಡಿ ಹಾಗೂ ಕು.ಹ.ಶಿ ಅವರು ರಚಿಸಿರುವ ಒಡೆದ ಒಪ್ಪುಗಳು ಕವನ ಸಂಕಲನವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ, ಸಂಘದ ಮಾರ್ಗದರ್ಶಕ ಹುಲಿಕಲ್ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಗಂಗೆಯ ಮೇಲಣಗವಿ ಮಲಯಶಾಂತಮುನಿ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮೀಜಿ, ಖಾನಿಮಠದ ಬಸವರಾಜಸ್ವಾಮೀಜಿ, ಸಂಘದ ರಾಜ್ಯಾಧ್ಯಕ್ಷ ಬಸವಲಿಂಗಯ್ಯ, ತಾಲೂಕು ಅಧ್ಯಕ್ಷ ಕೆ.ಮಹಾಲಿಂಗಯ್ಯ, ಎ.ಎಸ್.ಮುದ್ದಗಂಗಯ್ಯ, ಅರುಣಕುಮಾರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement