ಸಂಘಟನೆಗೆ ಮಹತ್ವದ ಶಕ್ತಿಯಿದೆ: ಸಿದ್ಧಲಿಂಗಶ್ರೀ
ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ , ಜೂ.24-
ಆಧುನಿಕ ಸಮಾಜದಲ್ಲಿ ಸಂಘಟನೆಗೆ ಮಹತ್ವದ ಶಕ್ತಿ ಇದೆ. ಸಂಘಟನೆಯಿಂದ ಮಾತ್ರ ಯಾವುದೇ ಕಾರ್ಯ ಸಾಧಿಸಲು ಸಾಧ್ಯ. ಇಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ ಎಂದು ಸಿದ್ಧಗಂಗಾ ಕ್ಷೇತ್ರದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಬಸವ ಭವನದಲ್ಲಿ ನಡೆದ ಅವರು ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮುದಾಯವನ್ನು ಗೌರವದಿಂದ ಕಂಡಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಈ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ನೌಕರರ ಸಂಘದ ಏಳಿಗೆಗೆ ಸಹಕಾರಿಯಾಗಲಿದೆ. ಸಮಾಜದ ಐಕ್ಯತೆ ಸಾಧಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. 12ನೇ ಶತಮಾನದಲ್ಲಿ ವಚನಕಾರರು ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಗೌರವಿಸುವ ಮೂಲಕ ವೀರಶೈವ ಧರ್ಮ ಸ್ಥಾಪಿಸಿದ ಆದರ್ಶ ನಮ್ಮದಾಗಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ ಎಲ್ಲರನ್ನೂ ಸಮಾನವಾಗಿ ಗೌರವಿಸುವುದನ್ನು ಕಲಿಸಿದ ಧರ್ಮ ವೀರಶೈವ ಧರ್ಮ. ಸಂಘದ ಸದಸ್ಯರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಂಘದ ಅಭ್ಯುದಯಕ್ಕೆ ನಗರದಲ್ಲಿ ಸೂಕ್ತ ನಿವೇಶನ ನೀಡಲಾಗುವುದು ಎಂದು ಹೇಳಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಿವೃತ್ತ ಎಸಿಪಿ ಲೋಕೇಶ್ವರ್ ಮಾತನಾಡಿ, ಲಿಂಗಾಯಿತ ಸಮುದಾಯದಲ್ಲಿರುವ ಎಲ್ಲ ಒಳಪಂಗಡಗಳು ಬೇರೆ ಎನ್ನುವ ಮನೋಭಾವ ಮರೆತು ಸಂಘಟಿತರಾಗಬೇಕು ಎಂದರು.