ಸ್ಮಶಾನ ಒತ್ತುವರಿ, ಗುಂಡು ತೋಪು ತೆರವುಗೊಳಿಸಿ: ವೆಂಕಟೇಶ್
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜೂ.24
ಸ್ಮಶಾನ ಒತ್ತುವರಿ ಮತ್ತು ಗುಂಡು ತೋಪುಗಳನ್ನು ತೆರವುಗೊಳಿಸಿ, ತಂತಿ ಬೇಲಿ ಹಾಕಿಸಲು ಪಂಚಾಯ್ತಿಗಳು ಕಟ್ಟುನಿಟ್ಟಿನ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಕರೆ ನೀಡಿದರು.
ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕಿನ 32 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸ್ಮಶಾನ ಮತ್ತು ಗುಂಡು ತೋಪುಗಳನ್ನು ಪಟ್ಟಭದ್ರ ಹಿತಾಶಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಕಾನೂನು ಬದ್ಧವಾಗಿ ತೆರವುಗೊಳಿಸುವ ಮೂಲಕ ಸರ್ಕಾರಿ ಸ್ವತ್ತುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಯಾರಿಗೂ ಅಧಿಕಾರ ಶಾಶ್ವತವಲ್ಲ, ಸರ್ಕಾರಿ ನೌಕರರು ನಿಜವಾದ ಬಡವರಿಗೆ ಸೌಲತ್ತು ನೀಡಲು ಪ್ರಾಮಾಣಿಕವಾಗಿ ಸ್ಪಂದಿಸಬೇಕಿದೆ ಎಂದು ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಅನಧಿಕೃತ ಶಾಲಾ ಕಟ್ಟಡ ಹಾಗೂ ಗ್ರಾಮ ಪಂಚಾಯ್ತಿ ಕಟ್ಟಡಗಳನ್ನು ಅಧಿಕೃತಗೊಳಿಸುವ ಮೂಲಕ ಸ್ವತ್ತುಗಳನ್ನು ನೋಂದಾಯಿಸುವಂತೆ ತಾ.ಪಂ.ಮಾಜಿ ಅಧ್ಯಕ್ಷ ಜಿ.ವಿ.ರಾಮಣ್ಣ ಸಭೆಯಲ್ಲಿ ಒತ್ತಾಯಿಸಿದರು.
ಜಲಾನಯನ: ಕಳೆದ 2010 ರಿಂದ 13ನೇ ಸಾಲಿನ ವರೆಗೆ ಜಲಾನಯನದಡಿ ನಡೆದಿರುವ ಸಸಿ ವಿತರಣೆ ಹಾಗೂ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ತಾ.ಪಂ. ಸದಸ್ಯ ಜಿ.ಕೃಷ್ಣ ಸಭೆಯಲ್ಲಿ ಒತ್ತಾಯಿಸಿದರು.ಇನ್ನೊಂದು ವಾರದೊಳಗೆ ಸಂಪೂರ್ಣ ಮಾಹಿತಿ ಒದಗಿಸುವುದಾಗಿ ವೆಂಕಟೇಶ್ ಉತ್ತರಿಸಿದರು. ಜಲಸಿರಿಯಡಿ 19.07 ಲಕ್ಷ ರು. ಕ್ರಿಯಾಯೋಜನೆಯನ್ನು ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಜಲಾನಯ ಯೋಜನೆ ಸಂಪೂರ್ಣ ಮಾಹಿತಿಯನ್ನು ಒಂದು ವಾರದೊಳಗೆ ನೀಡುವುದಾಗಿ ಜಲಾನಯನ ಅಧಿಕಾರಿ ನರೇಂದ್ರ ಸಭೆಗೆ ಉತ್ತರಿಸಿ, ಇಲಾಖೆ ಪ್ರಗತಿ ಕುರಿತು ಮಾಹಿತಿ ನೀಡಿದರು.
ಪಡಿತರ ಅವಾಂತರ: ತಾಲೂಕಿನಲ್ಲಿ ಪಡಿತರ ಚೀಟಿ ಅವಾಂತರಕ್ಕೆ ಮುಕ್ತಿ ಎಂದು, ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ಫಲಕ ಹಾಕಿಲ್ಲ, ಕಾಳಸಂತೆಯಲ್ಲಿ ಸೀಮೆಎಣ್ಣೆ ಮಾರಾಟ ದಂಧೆ ನಡೆಯುತ್ತಿದೆ ಎಂದು ಸದಸ್ಯ ಜಿ.ಕೃಷ್ಣ ಆಹಾರ ಇಲಾಖೆ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರಲ್ಲದೆ ಪಂಚಾಯ್ತಿ ಮಟ್ಟದಲ್ಲಿ ಪಡಿತರ ವಿತರಣೆ ಜಾಗೃತಿ ಸಮಿತಿ ರಚಿಸುವಂತೆ ಒತ್ತಾಯಿಸಿದರು.
ಕೂಡಲೆ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಮಾರಾಟದ ಪೂರ್ಣ ಮಾಹಿತಿಫಲಕ ಹಾಕುವಂತೆ ಸಭೆಯಲ್ಲಿ ಸದಸ್ಯರು ಒಕ್ಕರಲಿನಿಂದ ಒತ್ತಾಯಿಸಿದರು. ಇನ್ನೊಂದು ತಿಂಗಳಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಮಾಹಿತಿ ಫಲಕ ಹಾಕಲು ಅಗತ್ಯ ಕ್ರಮ ವಹಿಸುವುದಾಗಿ ಆಹಾರ ಇಲಾಖೆ ಶಿರಸ್ತೇದಾರ್ ಸದಾಶಿವಯ್ಯ ಸಭೆಗೆ ತಿಳಿಸಿದರು.
ಡೆಂಘೀ ಕುರಿತು ಕಾರ್ಯಗಾರ: ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಂಘೀ ಅರಿವು ಕುರಿತು ಸದಸ್ಯರಿಗೆ ಕಾರ್ಯಗಾರ ನಡೆಸಲು ಮುಂದಾಗ ಡಾ.ಶಶಾಂಕ್ ಅವರಿಗೆ, ಸದಸ್ಯರು ತೀವ್ರ ತರಾಟೆ ತೆಗೆದುಕೊಂಡ ಘಟನೆ ಸಭೆಯಲ್ಲಿ ನಡೆಯಿತು. ತಾಲೂಕಿನಲ್ಲಿ ಆರೋಗ್ಯ ಇಲಾಖೆ ಮಹಾಮಾರಿ ಡೆಂಘೀ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ, ಒಂದು ಹಳ್ಳಿಗಾದರೂ ಹೋಗಿ ಸ್ವಚ್ಛತೆಯ ಅರಿವು ಮೂಡಿಸಿಲ್ಲ, ಡೆಂಘೀ ಜ್ವರದ ವಿರುದ್ಧ ಮುಂಜಾಗ್ರತೆಯಿಂದ ಕರ ಪತ್ರಗಳನ್ನು ಮುದ್ರಿಸಿ ಹಳ್ಳಿಗಳಲ್ಲಿ ಹಂಚುವ ಮೂಲಕ ಜನಜಾಗೃತಗೊಳಿಸಿಲ್ಲ, ಆರೋಗ್ಯ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಲಾಯಿತು.
ಗ್ರಾಮ ಪಂಚಾಯ್ತಿಗಳ ಪಿಡಿಓಗಳು ಸಹ ಹಳ್ಳಿಗಳಲ್ಲಿನ ನೀರಿನ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಜಾಗೃತರಾಗಿಲ್ಲ, ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ ಎಂದು ಸದಸ್ಯರಾದ ಪೊಲೀಸ್ ರಾಮಣ್ಣ, ಜಿ.ವಿ. ರಾಮಣ್ಣ, ಜಿ.ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಹಾಮಾರಿ ಡೆಂಘೀ ತಡೆಯುವ ಮುಂಜಾಗ್ರತಾ ಕ್ರಮದಿಂದಾಗಿ ಕರಪತ್ರ ಮುದ್ರಿಸಿ ಪ್ರತಿ ಮನೆ, ಮನೆಗೂ ಹಂಚಬೇಕು. ಗ್ರಾಮಗಳಲ್ಲಿರುವ ನೀರಿನ ಟ್ಯಾಂಕ್ಗಳನ್ನು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸಿ, ನೈರ್ಮಲ್ಯ ಕಾಪಾಡುವಂತೆ ಜನಜಾಗೃತಿಗೊಳಿಸುವಂತೆ ಆದೇಶ ನೀಡಿದರೂ ಪಂಚಾಯ್ತಿಗಳ ಪಿಡಿಓಗಳು ಅಗತ್ಯ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪಿಡಿಓಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ತಾ.ಪಂ ಇಓ ಕೆ.ಬಿ. ಅಕ್ಕೋಜಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
ತಾ.ಪಂ. ಸದಸ್ಯರಾದ ಎಸ್.ಕಾಂತರಾಜು, ಶಂಕರಪ್ಪ, ಅರುಂಧತಿ ಚಿಕ್ಕಣ್ಣ, ಭಾರತಿ ಮಹದೇವಯ್ಯ, ಚಂದ್ರಕಲಾ ಪ್ರಭು, ಅನುಸೂಯಮ್ಮ ಮುದ್ದಹನುಮೇಗೌಡ, ವಿಶಾಲಮ್ಮ, ಪಶು ಇಲಾಖೆಯ ಡಾ.ಸಿ.ರಾಜಶೇಖರ್, ತೋಟಗಾರಿಕೆ ಇಲಾಖೆಯ ರೂಪಶ್ರೀ, ಕೃಷಿ ಇಲಾಖೆ ಎಚ್.ಸಿ. ಕೃಷ್ಣಪ್ಪ, ಬಿಇಓ ರಂಗಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.