ಚುಂಚನಹಳ್ಳಿಯಲ್ಲಿ ವಿಜಯಾ ಬ್ಯಾಂಕಿನ 1377ನೇ ಶಾಖೆ
ಬೆಂಗಳೂರು: ನಾಗಮಂಗಲ ತಾಲೂಕಿನ ಚುಂಚನಹಳ್ಳಿಯಲ್ಲಿ ನಿರ್ಮಿಸಲಾಗಿರುವ ವಿಜಯಾ ಬ್ಯಾಂಕಿನ 1377ನೇ ಶಾಖೆಯನ್ನು ಆದಿಚುಂಚನಗಿರಿ ಮಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಬ್ಯಾಂಕಿನ ಕಾರ್ಯಪಾಲಕ ನಿರ್ದೇಶಕರಾದ ಕೆ.ಆರ್. ಶೆಣೈ ಉದ್ಘಾಟಿಸಿದರು.
ನಂತರ ಮಾತನಾಡಿದ ಕೆ.ಆರ್. ಶೆಣೈ, ಗ್ರಾಮೀಣ ಭಾಗದಲ್ಲಿರುವ ಜನರ ಅನುಕೂಲಕ್ಕಾಗಿ 40 ಅತಿ ಸಣ್ಣ ಶಾಖೆಗಳನ್ನು ಪಕ್ಕಾ ಶಾಖೆಗಳಾಗಿ ಪರಿವರ್ತಿಸುವ ಯೋಜನೆ ಹೊಂದಿದ್ದು, ಅದರಲ್ಲಿ ಚುಂಚನಹಳ್ಳಿಯೂ ಒಂದಾಗಿದೆ. ಅಲ್ಲದೆ, ಮಂಡ್ಯ ಜಿಲ್ಲೆಯ ಇನ್ನು ಮೂರು ಅತೀ ಸಣ್ಣ ಶಾಖೆಗಳನ್ನು ಪಕ್ಕಾ ಶಾಖೆಗಳಾಗಿ ಪರಿವರ್ತಿಸಲಾಗುವುದು ಎಂದರು.
ಸರ್ಕಾರದ ಯೋಜನೆಯಾದ ವಿದ್ಯುತ್ ಚಾಲಿತ ವರ್ಗಾವಣೆ ಕಾರ್ಯಕ್ರಮದಲ್ಲಿ ಬ್ಯಾಂಕು ಸಕ್ರಿಯವಾಗಿ ಪಾಲ್ಗೊಂಡಿದ್ದು, ನಂತರದ ದಿನಗಳಲ್ಲಿ ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಇದರಿಂದ ವಿಧವಾ ವೇತನ, ವಿಕಲಾಂಗ ವೇತನ, ನರೇಗಾ ಯೋಜನೆಯಲ್ಲಿನ ವೇತನ ಮುಂತಾದವುಗಳನ್ನು ಈ ಮೂಲಕ ಪಡೆಯಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಡಿವೈಎಸ್ಪಿ ಶೋಭಾರಾಣಿ ಇದ್ದರು.