'ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮಂಜೂರಾತಿಗೆ ಪ್ರಯತ್ನ'
ಕ.ಪ್ರ.ವಾರ್ತೆ, ಮಾಗಡಿ, ಜೂ.29
ಸೋಲೂರು ಹೋಬಳಿಗೆ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮಂಜೂರಾತಿಗೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಹೇಳಿದರು.
ಇಲ್ಲಿನ ಸೋಲೂರು ಹೋಬಳಿ ಲಕ್ಕೇನಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮತ್ತು ವಾಜಪೇಯಿ ಶಾಲೆಗಳನ್ನು ತಾಲೂಕುಗಳಲ್ಲಿ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಲಿದೆ. ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆಗೆ ಕನಿಷ್ಠ 10 ಎಕರೆ ಭೂಮಿ ಇದ್ದರೆ ಆರಂಭಿಸಲು ಸರ್ಕಾರ ಅನುದಾನ ನೀಡುತ್ತದೆ. ವಾಜಪೇಯಿ ಶಾಲೆ ಆರಂಭಿಸಬೇಕಾದರೆ ಸುಮಾರು 20 ಎಕರೆ ಜಮೀನು ಇರಬೇಕಾಗುತ್ತದೆ.
ಸೋಲೂರು ಹೋಬಳಿಯಲ್ಲಿ ಸೂಕ್ತ ಜಮೀನು ಗುರುತಿಸುವ ಮೂಲಕ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮಂಜೂರಾತಿ ಮಾಡಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಕಳೆದ ವಾರ ಸೋಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದು, ಚಿಕಿತ್ಸೆಗೆ ಹತ್ತಾರು ರೋಗಿಗಳು ಕುಳಿತು ಕಾಯುತ್ತಿದ್ದಾಗ, ನಾನು ಸಹ ಒಬ್ಬ ವೈದ್ಯನಾಗಿದ್ದರಿಂದ ನಾನೇ ರೋಗಿಗಳ ಆರೋಗ್ಯ ಪರೀಕ್ಷಿಸಿ, ಸೂಕ್ತ ಸಲಹೆ ನೀಡಿದೆ. ವೈದ್ಯರಾದವರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದರೆ ಯಾರಿಗೂ ಹೆದರುವ ಅಗತ್ಯವಿಲ್ಲ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಆತ್ಮೀಯತೆಯಿಂದ ಕರೆದು ರೋಗ ವಾಸಿಯಾಗುವ ವಿಶ್ವಾಸ ಮೂಡಿಸಿ ಚಿಕಿತ್ಸೆ ನೀಡಿದರೆ ಸಾಕು. ಅರ್ಧ ರೋಗ ಅಲ್ಲೇ ಕಡಿಮೆಯಾಗುತ್ತದೆ ಎಂದರು.
ಯಾವ ತಾಲೂಕಿಗೆ ಹೋಬಳಿ ಸೇರುತ್ತದೆಯೋ, ಅದೇ ತಾಲೂಕಿನಗೆ ಹೋಬಳಿ ಸೇರಬೇಕು. ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಿ, ಹೋಬಳಿ ಸೇರ್ಪಡೆಗೆ ಮನವರಿಕೆ ಮಾಡುವುದಾಗಿ ವಿವರಿಸಿದರಲ್ಲದೆ ಸೋಲೂರು ಹೋಬಳಿ ಅಭಿವೃದ್ಧಿಯ ಜತೆಗೆ ಲಕ್ಕೇನಹಳ್ಳಿಯ ಪಂಚಾಯ್ತಿಯ ಅಭಿವೃದ್ಧಿಗೂ ಶಕ್ತಿ ಮೀರು ಶ್ರಮಿಸುತ್ತೇನೆ ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ ಮಾತನಾಡಿ, ಜಿಲ್ಲೆಗೊಂದು ನವೋದಯ ಶಾಲೆ ಮಂಜೂರಾಗುವುದರಿಂದ ಜಿಲ್ಲೆಯ ಹಿಂದುಳಿದ ಮಾಗಡಿ ತಾಲೂಕಿನ ಸೋಲೂರು ಹೋಬಳಿಯಲ್ಲಿಯೇ ನವೋಧಯ ಶಾಲೆ ತೆರೆಯಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಸೋಲೂರು ಹೋಬಳಿ ತಾ.ಪಂ. ಚುನಾವಣೆಗೆ ಮಾಗಡಿ ಕ್ಷೇತ್ರಕ್ಕೆ ಸೇರುತ್ತದೆ. ಜಿಲ್ಲಾ ಪಂಚಾಯ್ತಿಗೆ ರಾಮನಗರಕ್ಕೆ ಸೇರುತ್ತದೆ, ಎಂಎಲ್ಎ ಚುನಾವಣೆಗೆ ನೆಲಮಂಗಲಕ್ಕೆ ಸೇರುತ್ತಿದ್ದು, ಎಂ.ಪಿ. ಚುನಾವಣೆಗೆ ಚಿಕ್ಕಬಳ್ಳಾಪುರಕ್ಕೆ ಸೇರುವುದರಿಂದ ಅಭಿವೃದ್ಧಿಯಲ್ಲಿ ಹಿನ್ನೆಡೆಗಾಗುತ್ತಿದೆ. ಮಲತಾಯಿ ಧೋರಣೆಗೆ ಒಳಗಾಗುತ್ತಿದೆ. ಸರ್ಕಾರ ಇತ್ತ ಗಮನಹರಿಸಿ ಸೋಲೂರು ಹೋಬಳಿಯನ್ನು ನೆಲಮಂಗಲ ಕ್ಷೇತ್ರಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಜಿ.ಪಂ. ಸದಸ್ಯ ರಂಗಸ್ವಾಮಿ ತಿಳಿಸಿದರು.
ಸೋಲೂರಿನ ಸರ್ವತೋಮುಖ ಅಭಿವೃದ್ಧಿಗೆ ಚಿಂತಿಸಿದ್ದು, ಪಕ್ಷಾತೀತವಾಗಿ ಎಲ್ಲರು ಸಹಕರಿಸುವಂತೆ ತಾ.ಪಂ. ಸದಸ್ಯ ಶಂಕರಪ್ಪ ತಿಳಿಸಿದರು.
ಲಕ್ಕೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಲುವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ನಾರಾಯಣ್, ಸದಸ್ಯರಾದ ಎನ್.ಗಂಗರಾಜು, ಲಿಂಗೇಗೌಡ, ಶೋಭಾ, ಸುವರ್ಣಮ್ಮ, ರಾಮಾಂಜನಯ್ಯ, ರಮೇಶ್, ಲಲಿತಮ್ಮ, ಶೋಭಾ, ರಾಧಾ, ಪಿಡಿಓ ಎಲ್.ಆರ್. ದಿವ್ಯಾ, ಕಾರ್ಯದರ್ಶಿ ಕೆ.ವೆಂಕಟೇಶ್ ಇತರರು ಇದ್ದರು.