ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೀಸಲು ವಿಳಂಬ: ಹಾಳಾದ ಆಡಳಿತ

Vishwanath S
Updated On : 30 Jun 2013, 12:37 pm

ಕ.ಪ್ರ.ವಾರ್ತೆ, ರಾಮನಗರ, ಜೂ.29
ಹಿಂದಿನ ಆಡಳಿತಾವಧಿಯಲ್ಲಿ ಅರಾಜಕತೆಗೆ ದೂಡಲ್ಪಟ್ಟಿದ್ದ ರಾಮನಗರ ನಗರಸಭೆಯಲ್ಲಿ ಈಗ ಅಧಿಕಾರಿ ಮತ್ತುಸಿಬ್ಬಂದಿ ಅಬ್ಬರಕ್ಕೆ ನಾಗರಿಕರು ನಲುಗಿ ಹೋಗಿದ್ದಾರೆ. ನೂತನ ಚುನಾಯಿತ ವ್ಯವಸ್ಥೆಗೆ ಪದಗ್ರಹಣ ಮರೀಚಿಕೆ ಆಗಿರುವುದರ ಲಾಭ ಪಡೆದ ಅಧಿಕಾರಶಾಹಿ ಸ್ವೇಚ್ಚೆಯಿಂದ ವರ್ತಿಸುತ್ತಿದೆ.
ಪೌರ ಸಂಸ್ಥೆಗಳ ಹಿಂದಿನ ಆಡಳಿತಾವಧಿ ಕಳೆದ ಫೆಬ್ರವರಿಯಲ್ಲೇ ಅಂತ್ಯಗೊಂಡಿತು. ಮಾರ್ಚ್‌ನಲ್ಲಿ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದರೂ ಇಲ್ಲಿವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಗದಿಯಾಗದೆ ಚುನಾಯಿತರೆಲ್ಲರೂ ಅಧಿಕಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಬ್ಲೇಡ್ ಖಾತೆಗಳ ಮೂಲಕ ಮಾಲೀಕತ್ವ ಬದಲಾವಣೆ, ಬೇನಾಮಿ ಆಸ್ತಿಗಳ ಕಬಳಿಕೆ, ಅಕ್ರಮ ಬಡಾವಣೆಗಳಿಗೆ ಬೆಂಬಲ, ಮೂಲ ಸೌಲಭ್ಯಗಳು ಮರೀಚಿಕೆ, ಸುಳ್ಳು ದಾಖಲೆಗಳ ಸೃಷ್ಟಿಯಂತಹ ಹಲವಾರು ಹಗರಣಗಳಿಂದ ಈ ನಗರಸಭೆ ಕುಖ್ಯಾತಿ ಪಡೆದಿದೆ.
ಈ ಹಿಂದಿನ ಹಲವಾರು ಚುನಾಯಿತ ಪ್ರತಿನಿಧಿಗಳು ಮಾಡಿಟ್ಟ ಅವಾಂತರ, ಅದ್ವಾನಗಳನ್ನು ಸರಿಪಡಿಸಲು ಹತ್ತಾರು ವರ್ಷವೇ ಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿ, ಸಿಬ್ಬಂದಿಯಾದರೂ ರಾಮನಗರ ನಗರಸಭೆಗೆ ಕಾಯಕಲ್ಪ ನೀಡಿ, ಮಾನ ಉಳಿಸುತ್ತಾರೆನ್ನುವ ನಿರೀಕ್ಷೆಯೂ ಹುಸಿಯಾಗಿದೆ.
ಖಾಲಿ ಕುರ್ಚಿಗಳು:  ಇತ್ತ ಪೌರ ಸಂಸ್ಥೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕಡಿವಾಣ ಇಲ್ಲದಾಗಿದೆ. ಹೇಳೋರು ಕೇಳೋರಿಲ್ಲದ ಪರಿಣಾಮ ಅಧಿಕಾರಿ ಮತ್ತು ಸಿಬ್ಬಂದಿಯು ನಾಗರಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಷ್ಟು ಮಾತ್ರವಲ್ಲದೆ, ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿರುವುದೂ ವಿರಳವಾಗಿದೆ.
ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಬರುವ ನಾಗರಿಕರಿಗೆ ಖಾಲಿ ಕುರ್ಚಿಗಳ ಸ್ವಾಗತವಿರುತ್ತದೆ. ಗಂಟೆಗಟ್ಟಲೆ ಕಾದು ಕುಳಿತರೂ ಕ್ಯಾರೇ ಎನ್ನುವವರಿಲ್ಲ. ಕಡೇಪಕ್ಷ ಟಪಾಲು ವಿಭಾಗಕ್ಕೆ ದೂರು ಕೊಟ್ಟು ಹೋಗೋಣವೆಂದರೆ ಅಲ್ಲಿನ ಕುರ್ಚಿಯೂ ಖಾಲಿಯಾಗಿರುತ್ತದೆ.
ಚುನಾವಣೆ ನೆಪ:  ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ನೌಕರರು ಪೌರ ಸಂಸ್ಥೆ ಚುನಾವಣೆ, ಏಪ್ರಿಲ್ ಮೇ ಮಾಹೆಯಲ್ಲಿ ವಿಧಾನಸಭೆ ಚುನಾವಣೆಯ ನೆಪವೊಡ್ಡಿ ಅಧಿಕಾರಿಗಳು ಮತ್ತು ಸಿಬ್ಬಂದಿ ದೈನಂದಿನ ಜವಾಬ್ದಾರಿಗಳಿಂದ ನುಣುಚಿಕೊಂಡರು. ಇಷ್ಟಲ್ಲದೆ, ಸಾರ್ವಜನಿಕರ ಸಂಪರ್ಕವನ್ನೇ ಕಡಿದುಕೊಂಡಿದ್ದರು. ಚುನಾವಣಾ ಕರ್ತವ್ಯ ಇರುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗದು ಎನ್ನುವ ಪತ್ರವನ್ನು ನಗರಸಭೆಯ ಸೂಚನಾ ಫಲಕಕ್ಕೆ ಏರಿಸಲಾಗಿತ್ತು. ಅದಿನ್ನೂ ರಾರಾಜಿಸುತ್ತಿದೆ. ಚುನಾವಣೆ ಮುಗಿದ ತರುವಾಯವೂ ನಗರಸಭೆಯಲ್ಲಿ ವ್ಯವಸ್ಥೆ ಮಾತ್ರ ಬದಲಾಗಿಲ್ಲ.
ತಲೆ ಹಾಕದ ಡಿಸಿ:  ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಶೇಷಾದ್ರಿ ಅವರು ಬೆಳಗ್ಗೆ 10.30ಕ್ಕೆ ಕಚೇರಿಯಲ್ಲಿ ಖುದ್ದು ಹಾಜರಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿ ಪರಿಶೀಲಿಸುತ್ತಿದ್ದರು. ತಡವಾಗಿ ಬಂದವರಿಗೆ 1-2 ಅವಕಾಶ ನೀಡಿ, ಮುಂದುವರಿದರೆ ಮುಲಾಜಿಲ್ಲದೆ ಗೈರು ಹಾಜರೆಂದು ನಮೂದಿಸುತ್ತಿದ್ದರು.
ಅದಾದ ಬಳಿಕ ಬಂದವರೆಲ್ಲ ಅಧಿಕಾರ ಚಲಾಯಿಸುವ ಗೋಜಿಗೆ ಹೋಗಲೇ ಇಲ್ಲ. ಪ್ರಸ್ತುತ ರಾಮನಗರ ನಗರಸಭೆಗೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರೇ ಆಡಳಿತಾಧಿಕಾರಿ. ಇತ್ತ ತಲೆ ಹಾಕದ ಅವರು ಇಲ್ಲಿನ ಆಗು ಹೋಗುಗಳು, ನೌಕರರ ಕಾರ್ಯವೈಖರಿ ಬಗ್ಗೆ ನಿಗಾ ವಹಿಸುತ್ತಿಲ್ಲ.
ಮಾತಿಗೆ ಕಿಮ್ಮತ್ತಿಲ್ಲ:  ನಗರಸಭೆಯ ಕಸ ವಿಲೇವಾರಿ ಗುತ್ತಿಗೆದಾರ ಕಸವನ್ನೆಲ್ಲಾ ನಗರದಂಚಿನಲ್ಲೇ ವಿಲೇವಾರಿ ಮಾಡಿದ್ದು ಬೆಳಕಿಗೆ ಬಂದಿತ್ತು. ಕಳ್ಳ ಮಾರ್ಗದಲ್ಲಿ ಹತ್ತಾರು ಕಡೆ ಕಸ ವಿಲೇವಾರಿ ಆಗಿದ್ದರೂ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ಸಣ್ಣ ಪ್ರಮಾಣದಲ್ಲಿ ಕಸ ಹಾಕಿದ್ದ ಸ್ಥಳಕ್ಕೆ ಮಾತ್ರವೇ.
ವಿಲೇವಾರಿ ಆಗಿರುವ ಕಸಕ್ಕೆ ಮಣ್ಣು ಮುಚ್ಚಬೇಕು. ಗುತ್ತಿಗೆದಾರರನ್ನು ಬದಲಿಸಬೇಕು ಎಂದು ಆದೇಶಿಸಿದ್ದರು. ಇಷ್ಟಲ್ಲದೆ, ಪರಿಸರ ಎಂಜಿನಿಯರ್ ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್‌ಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದರು.
ಜಿಲ್ಲಾಧಿಕಾರಿ ಆದೇಶದ ಪ್ರಕಾರ ಏನೂ ನಡೆದಿಲ್ಲ. ನೋಟೀಸ್ ಜಾರಿಗೆ ಉತ್ತರ ಪಡೆದಿದ್ದಾಗಿದೆ. ಗುತ್ತಿಗೆದಾರರ ಬದಲಾವಣೆ ಹೇಳಿಕೆಗೆ ಸೀಮಿತವಾಗಿದೆ. ಕಸವನ್ನು ಮಣ್ಣಿನಿಂದ ಮುಚ್ಚುವಂತೆ ನೀಡಿದ ನಿರ್ದೇಶನಕ್ಕೆ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ಕಡತ ವಿಲೇವಾರಿ ಇಲ್ಲ:  ಕಸ ವಿಲೇವಾರಿ ಗುತ್ತಿಗೆಗೆ ಕಳೆದೊಂದು ವರ್ಷದ ಹಿಂದೆಯೇ ಅನುಮೋದನೆ ದೊರೆತು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರನ್ನು ಬದಲಿಸಬೇಕು ಎಂದು ಹೇಳುವ ಸ್ವತಃ ಜಿಲ್ಲಾಧಿಕಾರಿ ಟೆಂಡರ್ ಪೂರ್ಣಗೊಂಡಿರುವ ಕಡತಕ್ಕೆ ಸಹಿ ಹಾಕದೆ ವಿಳಂಬ ಮಾಡುತ್ತಿದ್ದಾರೆ.
ಖಾತೆ ಬದಲಾವಣೆ, ವಿವಿಧ ಬಿಲ್ ಪಾವತಿ, ಕಾಮಗಾರಿಗಳ ಅನುಷ್ಠಾನ ಸೇರಿದಂತೆ ಬಹುತೇಕ ಪ್ರಮುಖ ಕಡತಗಳು ಕುಳಿತ ಜಾಗದಿಂದ ಕದಲುತ್ತಿಲ್ಲ. ಸಾಕಷ್ಟು ಕಾಮಗಾರಿಗಳ ಬಿಲ್ ಪಾವತಿಸಿದ್ದರೂ ಅವುಗಳ ಟೆಂಡರ್ ಪ್ರಕಟಣೆಯ ಬಿಲ್ ಸಂದಾಯ ಮಾಡುತ್ತಿಲ್ಲ.
ರಾಮನಗರ ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲದಂತಾಗಿದೆ. ಯಾವ ಕೊಠಡಿಗೆ ಹೋದರೂ ಖಾಲಿ ಕುರ್ಚಿಗಳೇ ರಾರಾಜಿಸುತ್ತಿರುತ್ತವೆ. ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಚೇರಿಗೆ ಬರೋದು, ಹೋಗೋದಕ್ಕೆ ನಿರ್ದಿಷ್ಟ ಸಮಯವೇ ಇಲ್ಲ. ಇದನ್ನು ಕೇಳೋರೂ ಇಲ್ಲ.
-ಪುಟ್ಟೇಗೌಡ, ನಾಗರಿಕ.

-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement