ಶಾಸಕ ಸೋಮಶೇಖರ್ಗೆ ಸ್ವಗ್ರಾಮ ಶೆಟ್ಟಿಹಳ್ಳಿಯಲ್ಲಿ ಅದ್ಧೂರಿ ಸ್ವಾಗತ
ಕ.ಪ್ರ.ವಾರ್ತೆ, ರಾಮನಗರ, ಜೂ.29
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಸ್ವಗ್ರಾಮವಾದ ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ತವರಿನ ಹೃದಯಸ್ಪರ್ಶಿ ಸನ್ಮಾನವನ್ನು ಶನಿವಾರ ನೆರವೇರಿಸಲಾಯಿತು.
ಗ್ರಾಮಸ್ಥರು ಪಟಾಕಿ ಸಿಡಿಸಿ, ತಮಟೆ ವಾದ್ಯ ಸಮೇತ ಮೆರವಣಿಗೆಯಲ್ಲಿ ಸೋಮಶೇಖರ್ ಅವರನ್ನು ಮತ್ತೀಕೆರೆ ಬಳಿಯ ಹೆದ್ದಾರಿಯಿಂದ ಶೆಟ್ಟಿಹಳ್ಳಿಗೆ ಕರೆದೊಯ್ದರು. ಸೋಮಶೇಖರ್ ಮತ್ತು ಕುಟುಂಬದವರು ಶ್ರೀಆಂಜನೇಯಸ್ವಾಮಿ ಮತ್ತು ಗ್ರಾಮ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಸೋಮಶೇಖರ್ ಅವರಿಗೆ ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಮುಂದಿನ ದಿನಗಳಲ್ಲಿ ಸೋಮಶೇಖರ್ ಅವರು ಸಚಿವರಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹುಟ್ಟೂರಿನ ಅಭಿನಂದನೆಗಿಂತ ಮಿಗಿಲಾದುದು ಬೇರೊಂದಿಲ್ಲ. ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರನ್ನು ಮರೆಯುವುದಿಲ್ಲ. ಇಲ್ಲಿನ ಜನರ ಸಹಕಾರ, ಸ್ನೇಹ, ಪ್ರೀತ್ಯಾದರಗಳಿಗೆ ಬೆಲೆ ಕಟ್ಟಲಾಗದು ಎಂದು ಬಣ್ಣಿಸಿದರು.
ಶೆಟ್ಟಿಹಳ್ಳಿ ಗ್ರಾಮವು ತಮ್ಮ ಕ್ಷೇತ್ರ ವ್ಯಾಪ್ತಿಗೆ ಸೇರಿಲ್ಲ ನಿಜ. ಆದರೆ, ಕಾರ್ಯಕ್ಷೇತ್ರವನ್ನು ಮೀರಿ ಈ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಲಾದ ಮಟ್ಟಿಗೆ ಶ್ರಮಿಸುವೆ. ತವರಿನ ಜನತೆಯ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದು ಭರವಸೆಯಿತ್ತರು.
ಶೆಟ್ಟಿಹಳ್ಳಿಯ ಸೀತಮ್ಮ ಮತ್ತು ತಿಮ್ಮೇಗೌಡರ ಪುತ್ರ ಸೋಮಶೇಖರ್ ಅವರು ತಮ್ಮ ಬಾಲ್ಯ, ವಿದ್ಯಾರ್ಥಿ ಜೀವನದ ದಿನಗಳನ್ನು ನೆನೆದರು. ಇಲ್ಲಿನ ಜನರೊಂದಿಗೆ ತಮ್ಮ ಒಡನಾಟವನ್ನು ಇದೇ ವೇಳೆ ಮೆಲುಕು ಹಾಕಿದರು.
ಸೋಮಶೇಖರ್ ಅವರನ್ನು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಸಿ. ವಿಜಯೇಂದ್ರ, ತಾ.ಪಂ. ಮಾಜಿ ಸದಸ್ಯ ಎಸ್.ಆರ್. ಪ್ರಮೋದ್, ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಎಸ್.ಟಿ.ನಾರಾಯಣಗೌಡ ಸನ್ಮಾನಿಸಿದರು. ಪತ್ರಕರ್ತ ಮತ್ತೀಕೆರೆ ಜಯರಾಮ್ ಅಭಿನಂದನಾ ಭಾಷಣ ಮಾಡಿದರು. ಎಸ್.ಎಚ್.ರವಿ ಸ್ವಾಗತಿಸಿದರು.
ಸೋಮಶೇಖರ್ ಅವರ ತಾಯಿ ಸೀತಮ್ಮ, ಸಹೋದರ ಶ್ರೀನಿವಾಸ್, ಸಹೋದರಿಯರು, ಗ್ರಾಮದ ಹಿರಿಯರಾದ ತಿಮ್ಮೇಗೌಡ, ರಾಜಣ್ಣ, ಎಸ್.ಪಿ.ಪುಟ್ಟಸ್ವಾಮಿ, ಜಿ.ಪಂ. ಲೆಕ್ಕಾಧಿಕಾರಿ ಚಲುವರಾಜು ಮತ್ತೀಕೆರೆ, ಜೆಡಿಎಸ್ ಮುಖಂಡ ಎಂ.ಸಿ.ಎಚ್. ಮೆಹರೀಶ್, ಎಂಪಿಸಿಎಸ್ ಅಧ್ಯಕ್ಷ ಧರ್ಮನಂದನ, ಗ್ರಾಮದ ಎಸ್.ಆರ್.ವಿನೋದ್, ರಾಜು, ಮಂಜೇಶ್ಬಾಬು, ಭೀಮೇಶ್, ಮೋಹನ್, ಕೃಷ್ಣಪ್ರಸಾದ್, ಚಲುವರಾಜು ಎಂ.ಎಲ್.ಶಂಕರಪ್ಪ ಭಾಗವಹಿಸಿದ್ದರು.
ಶಾಸಕದ್ವಯರಿಗೆ ಸನ್ಮಾನ: ಮತ್ತೀಕೆರೆ- ಶೆಟ್ಟಿಹಳ್ಳಿಯ ಸಾರ್ವಜನಿಕ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕದ್ವಯರಾದ ಎಸ್.ಟಿ. ಸೋಮಶೇಖರ್ ಮತ್ತು ಸಿ.ಪಿ. ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಸಿ ನೆಡುವ ಕಾರ್ಯಕ್ರಮ ನಡೆಯಿತು.