ಲಂಚ ಪಡೆಯತ್ತಿದ್ದ ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ
ರಾಮನಗರ: ಅಪಘಾತಕ್ಕೀಡಾಗಿದ್ದ ಲಾರಿಯೊಂದರ ಮಾಲೀಕರಿಂದ 2000 ರು. ಲಂಚ ಪಡೆಯತ್ತಿದ್ದ ಸಂಚಾರಿ ಠಾಣೆ ಪೊಲೀಸ್ ಪೇದೆ ಮಾರಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೇಲಧಿಕಾರಿಗಳ ಶಾಮೀಲಾತಿ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು ವಿಚಾರಣೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಪಿಎಸ್ಐ, ಎಎಸ್ಐ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
ಕೇಂದ್ರಕ್ಕೆ ಅಭಿನಂದನೆ
ಕನಕಪುರ: ಬೆಂಗಳೂರು ಸತ್ಯಮಂಗಲ ನೂತನ ರೇಲ್ವೆ ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಕೃಷಿ ಪ್ರಶಸ್ತಿ ವಿಜೇತ, ಕೆಪಿಸಿಸಿ ಸದಸ್ಯ ಹೊನ್ನಿಗನಹಳ್ಳಿ ಶ್ರೀಕಂಠು ಸ್ವಾಗತಿಸಿದ್ದಾರೆ. ಯೋಜನೆಯ ಮಂಜೂರಾತಿಗಾಗಿ ಶ್ರಮಿಸಿದ ಸಂಸದ ಧ್ರುವನಾರಾಯಣ್, ಕೇಂದ್ರ ಸಚಿವ ಮುನಿಯಪ್ಪ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಸತ್ಯಮಂಗಲವನ್ನು ಸಂಪರ್ಕಿಸುವ ನೂತನ ರೇಲ್ವೆ ಯೋಜನೆ ಈ ಪ್ರಾಂತ್ಯದ ಜನರ ಅನೇಕ ದಶಕಗಳ ಬೇಡಿಕೆಯಾಗಿದ್ದು, ಸಾರ್ವಜನಿಕರಿಗೆ, ವಸ್ತುಗಳ ಸಾಗಣೆಗೆ ಬಹಳ ಅನುಕೂಲವಾಗಲಿದೆ. ಕನಕಪುರ ಉಪನಗರವಾಗುತ್ತಿದ್ದು, ತಮಿಳುನಾಡಿನ ಗಡಿಯವರೆಗೆ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನೆಯಾಗಿದೆ. ವರ್ತುಲರಸ್ತೆ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಹಾರೋಹಳ್ಳಿ ಕೈಗಾರಿಕಾ ಬೃಹತ್ ವಸಾಹತು ಕಾರ್ಯಾರಂಭ ಮಾಡುತ್ತಿದ್ದು, ನೂತನ ರೇಲ್ವೆ ಯೋಜನೆಯಿಂದ ಈ ಪ್ರದೇಶ ಶೀಘ್ರ ಬೆಳವಣಿಗೆ ಪಡೆಯಲಿದೆ ಎಂದು ಮುಖಂಡ ಶ್ರೀಕಂಠು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್, ಕಾಂಗ್ರೆಸ್ ಮುಖಂಡರುಗಳಾದ ಎ.ಟಿ.ಲೋಕೇಶ್, ಪ್ರಕಾಶ್ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಿಗೆ ತಿಳಿವಳಿಕೆ ಕಾರ್ಯಕ್ರಮ
ಹೊಸಕೋಟೆ: ವಿಶ್ವ ವಿಜ್ಞಾನ ದಿನದ ಅಂಗವಾಗಿ ಇಲ್ಲಿನ ಹೊರವಲಯದಲ್ಲಿರುವ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯು ತಮ್ಮ ಕ್ರೈಸ್ಟ್ ಕ್ಯಾಂಪಸ್ನಲ್ಲಿ ಪಟ್ಟಣದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಆಹ್ವಾನಿಸಿ, ವಿಜ್ಞಾನದ ಬಗ್ಗೆ ತಿಳಿವಳಿಕೆ ನೀಡುವುದರ ಜೊತೆಗೆ, ವಿಜ್ಞಾನದ ಬಗ್ಗೆ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಏರ್ಪಡಿಸಲಾಗಿತ್ತು.
ರೈಲಿಗೆ ಸಿಲುಕಿ ವ್ಯಕ್ತಿ ಸಾವು: ಸಂಚಾರದಲ್ಲಿ ವ್ಯತ್ಯಯ
ರಾಮನಗರ: ನಗರದ ರೈಲು ನಿಲ್ದಾಣದಲ್ಲಿ ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲಿನ ಎಂಜಿನ್ಗೆ ಅಪರಿಚಿತ ವ್ಯಕ್ತಿ ಸಿಲುಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೈಲು ಸಂಚಾರ ವ್ಯತ್ಯಯವಾದ ಘಟನೆ ರಾತ್ರಿ ನಡೆದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.