ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸ್ಪರ್ಧಿಗಳ ಪಾಲಿಗೆ ಹೊಸ ಮತದಾರರ ಸೇರ್ಪಡೆ ತಲೆನೋವು

Parashurama
Updated On : 2 Mar 2013, 12:21 pm

ರಾಮನಗರ: ಪ್ರಸಕ್ತ ಚುನಾವಣೆಗೆ ಮುನ್ನ ಹಲವು ವಾರ್ಡ್‌ಗಳ ಮರು ವಿಂಗಡಣೆ ಸದ್ದಿಲ್ಲದೆ ನಡೆದಿದೆ. ಸ್ಪರ್ಧಿಗಳ ಪಾಲಿಗೆ ಹೊಸ ಮತದಾರರ ಸೇರ್ಪಡೆ ಒಂದು ರೀತಿಯ ತಲೆನೋವಾಗಿದ್ದರೆ, ಮೊದಲಿದ್ದ ವಾರ್ಡ್‌ನಲ್ಲೇ ಮತದಾನದ ಹಕ್ಕು ಉಳಿಸಿಕೊಂಡು ಬೇರೆಡೆ ತೆರಳಿ ವಾಸವಿರುವ ಬಾಡಿಗೆ ಮನೆ ನಿವಾಸಿಗಳ ಹುಡುಕಾಟ ಮತ್ತೊಂದು ತಾಪತ್ರಯದ ಕೆಲಸವಾಗಿದೆ.
ಪ್ರತಿ ಪೌರ ಸಂಸ್ಥೆ ವ್ಯಾಪ್ತಿಯ ಶೇಕಡ 60 ರಿಂದ 70ರಷ್ಟು ವಾರ್ಡ್‌ಗಳಲ್ಲಿ ಮರು ವಿಂಗಡಣೆ ನಡೆದಿದೆ. ಅಧಿಕಾರಸ್ಥ ರಾಜಕಾರಣಿಗಳ ಕೈಗೊಂಬೆಯಾದ ಅಧಿಕಾರಿ ವರ್ಗವು ಈ ಎಡವಟ್ಟು ಮಾಡಿಟ್ಟು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಈ ಪರಿಣಾಮ ಅಭ್ಯರ್ಥಿಗಳು ಪರದಾಡುತ್ತಿದ್ದು, ರಾಜಕೀಯ ಲೆಕ್ಕಾಚಾರವೂ ಕೊಂಚ ಏರುಪೇರಾಗುವ ಸಂಭವವಿದೆ.
ವಾರ್ಡ್ ಮರು ವಿಂಗಡಣೆಯಲ್ಲಿ ಮತದಾರರ ಪ್ರಮಾಣವನ್ನು ಸರಿದೂಗಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಪ್ರಭಾವಿ ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭವನ್ನು ಗಮನದಲ್ಲಿಟ್ಟುಕೊಂಡು, ಇಚ್ಛಾನುಸಾರ ಬದಲಾವಣೆ ಮಾಡಿಸಿದ್ದಾರೆ. ಮರು ವಿಂಗಡಣೆಯಿಂದ ಕೆಲ ವಾರ್ಡ್ ಮತದಾರರ ಸಂಖ್ಯೆ, ವಿಸ್ತಾರ ಗಣನೀಯವಾಗಿ ಹೆಚ್ಚಿದ್ದರೆ, ಮತ್ತೆ ಕೆಲ ವಾರ್ಡ್‌ನಲ್ಲಿ ಇಳಿದಿದೆ.
ಇಲ್ಲೂ ಜಾತಿ ಲೆಕ್ಕಾಚಾರ: ಸಾಕಷ್ಟು ವಾರ್ಡ್‌ಗಳ ಮರು ವಿಂಗಡಣೆಯಲ್ಲಿ ಜಾತಿ ಮತ್ತು ಓಟಟ್ಬ್ಯಾಂಕ್ಲೆಕ್ಕಾಚಾರ ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡು, ಬೆಂಬಲಿಗರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಪ್ರಭಾವಿ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿದಿದ್ದಾರೆ. ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವೂ ಮರು ವಿಂಗಡಣೆಗೆ ಕಣ್ಮುಚ್ಚಿ ಅಂಕಿತ ಹಾಕಿದೆ.
ಕನಕಪುರ, ಚನ್ನಪಟ್ಟಣ, ಮಾಗಡಿ ಪೌರ ಸಂಸ್ಥೆಗಳಿಗೆ ಹೋಲಿಸಿದಲ್ಲಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲೇ ಅತಿ ಹೆಚ್ಚು ವಾರ್ಡ್‌ಗಳ ಮರು ವಿಂಗಡಣೆ ನಡೆದಿದೆ. ಮರು ವಿಂಗಡಣೆಯಿಂದ ಕೆಲ ಸ್ಪರ್ಧಿಗಳು ಲಾಭದ ನಿರೀಕ್ಷೆಯಲ್ಲಿದ್ದರೆ, ಮತ್ತೆ ಹಲವರು ಸೋಲಿನ ಭೀತಿಗೆ ಒಳಗಾಗಿದ್ದಾರೆ. ಕೆಲ ಹಾಲಿ ಸದಸ್ಯರು ಸ್ಪರ್ಧೆಗೆ ಹಿಂದೇಟು ಹಾಕಿದ್ದರ ಹಿಂದೆಯೂ ಇದೇ ಮಹಿಮೆ ಅಡಗಿದೆ.
ಹೋದವರಿಗೆ ಹುಡುಕಾಟ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲರೂ ಸ್ವಂತ ಸೂರು ಇದ್ದವರಲ್ಲ. ಶೇಕಡ 50ರಷ್ಟು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಆಗಾಗ್ಗೆ ಮನೆ ಬದಲಾಯಿಸುವುದು ಮಾಮೂಲು. ಹಿಂದೆ ಇದ್ದ ವಾರ್ಡ್‌ನಲ್ಲೇ ಮತದಾನದ ಹಕ್ಕು ಉಳಿಸಿಕೊಂಡು, ಈಗ ಬೇರೆಡೆ ವಾಸವಿರುವ ಅದೆಷ್ಟೋ ಮಂದಿ ಇದ್ದಾರೆ. ಅವರ ಹುಡುಕಾಟದ ತಾಪತ್ರಯ ಅಭ್ಯರ್ಥಿಗಳಿಗೆ ಎದುರಾಗಿದೆ.
ಆಯಾ ವಾರ್ಡ್‌ನಲ್ಲಿ ಇರುವ ಮತದಾರರಿಗಿಂತ ಬೇರೆಡೆ ಸ್ಥಳಾಂತರಗೊಂಡ ಮತದಾರರಿಗೆ ಡಿಮ್ಯಾಂಡ್ ಹೆಚ್ಚಿದೆ. ಅವರ ಮನವೊಲಿಕೆಯಲ್ಲಿ ನಿರತರಾದ ಅಭ್ಯರ್ಥಿಗಳು ಬಳುವಳಿಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಕೆಲವರು ನಗರವನ್ನೇ ತೊರೆದು, ಹೊರ ಹೋಗಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿದೆ. ಅಂತಹವರನ್ನು ಸಂಪರ್ಕಿಸಿ, ಪ್ರಯಾಣ ಮತ್ತು ಇತರೆ ಭತ್ಯೆಯ ಆಮಿಷವೊಡ್ಡಿ ಮತದಾನ ಬರುವಂತೆ ಬೇಡುವ ಕೆಲಸ ನಡೆದಿದೆ.
ಆಗಿಲ್ಲ ತಿದ್ದುಪಡಿ: ಮತದಾರರ ಪಟ್ಟಿಯಲ್ಲಿ ಸಾಕಷ್ಟು ತಿದ್ದುಪಡಿ ಆಗಿಯೇ ಇಲ್ಲವೆನ್ನುವ ದೂರು ಕೇಳಿ ಬರುತ್ತಿದೆ. ರಾಮನಗರದ 21ನೇ ವಾರ್ಡ್‌ನ ಮತದಾರರೊಬ್ಬರು ದೂರುವ ಪ್ರಕಾರ, ತಪ್ಪಾಗಿ ನಮೂದಾಗಿದ್ದ ತಮ್ಮ ಹೆಸರನ್ನು ಸರಿಪಡಿಸುವಂತೆ ಮತ್ತು ನಿಧನರಾದ ತಮ್ಮ ತಂದೆಯ ಹೆಸರು ಕೈಬಿಡುವಂತೆ 4 ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪಟ್ಟಿ ಯಥಾ ಪ್ರಕಾರ ಮುಂದುವರೆದಿದೆ.
ಮತದಾರರ ಪಟ್ಟಿಯಲ್ಲಿರುವ ನಿಧನರಾದವರ ಹೆಸರಿನಲ್ಲೂ ಮತ ಚಲಾಯಿಸುವ ಚಾಲಾಕಿತನ ತೋರುವ ಮಂದಿಗೇನೂ ಕಮ್ಮಿಯಿಲ್ಲ. ಭ್ರಷ್ಟಾತಿಭ್ರಷ್ಟ ಚುನಾವಣಾ ವ್ಯವಸ್ಥೆಯಿರುವ ರಾಮನಗರದಂತಹ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಲೋಪವು ಸಾಕಷ್ಟು ಎಡವಟ್ಟುಗಳಿಗೆ ಆಸ್ಪದ ಮಾಡಿಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಜೆಂಟರು, ಮತಗಟ್ಟೆ ಅಧಿಕಾರಿಗಳು ಎಚ್ಚರ ವಹಿಸದಿದ್ದಲ್ಲಿ ನಕಲಿ ಮತದಾನ ತಪ್ಪಿದ್ದಲ್ಲ.
- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments