ಕಾಂಗ್ರೆಸ್ನಲ್ಲಿ ಬದಲಾವಣೆಯ ಗಾಳಿ
ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ಹಾಗೂ ಸುಶಿಕ್ಷಿತ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಹಾಗೂ ಕೆಲ ಬದಲಾವಣೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೆಲವರ ಕ್ಷೇತ್ರ ಬದಲಾವಣೆಯಾದರೆ ಇನ್ನು ಕೆಲ ಹೊಸ ಮುಖಗಳ ಪರಿಚಯವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಶಾಸಕ ಕೃಷ್ಣಭೈರೇಗೌಡರನ್ನು ಈ ಬಾರಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಜಯನಗರ ಕ್ಷೇತ್ರದಿಂದ ಹಿರಿಯ ಮುಖಂಡ ವಿ.ಆರ್. ಸುದರ್ಶನ್ ಅವರಿಗೆ ಟಿಕೆಟ್ ನೀಡುವ ಆಲೋಚನೆ ಇದೆ. ತೇರದಾಳ ಕ್ಷೇತ್ರದಿಂದ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪದ್ಮನಾಭನಗರ ಕ್ಷೇತ್ರಕ್ಕೆ ಬಿಬಿಎಂಪಿ ಹಾಲಿ ಸದಸ್ಯೆ ಜ್ಯೋತಿ ಶ್ರೀಹರಿ ರೆಡ್ಡಿ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿದೆ. ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಗೌಡ, ಹೆಬ್ಬಾಳದಿಂದ ಬಿ.ಎಲ್. ಶಂಕರ್, ಚಾಮರಾಜಪೇಟೆಯಿಂದ ರಿಜ್ವಾನ್ ಹರ್ಷದ್ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.