ಮುಖಂಡರ ವಿರುದ್ಧ ಎಚ್‌ಡಿಕೆ ಗರಂ
ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ತಾಲೂಕಿನ ಜೆಡಿಎಸ್ ಮುಖಂಡರ ವಿರುದ್ಧ ಗರಂ ಆಗಿ, ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಹೆಲಿಪ್ಯಾಡ್‌ನಲ್ಲಿ ಭಾನುವಾರ ನಡೆಯಿತು. ನಗರಕ್ಕೆ ಬಂದಿಳಿದ ಕುಮಾರಸ್ವಾಮಿ ತಾವಿಲ್ಲಿ ಅರ್ಧ ತಾಸು ಮಾತ್ರವೇ ರೋಡ್ ಶೋ ನಡೆಸುವುದಾಗಿ ಹೇಳಿದರು. ಆಗ ಅಲ್ಲಿದ್ದ ಮುಖಂಡರು ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಬೇಕೆನ್ನುವ ಬೇಡಿಕೆ ಇಟ್ಟರು. ಇದರಿಂದ ಕುಮಾರಸ್ವಾಮಿ ಕೆಂಡಾಮಂಡಲರಾದರು. ನೀವಿಲ್ಲಿ ಕಡಿದು ಕಟ್ಟೆ ಹಾಕಿರೋದು ಏನು, ಪ್ರತಿಯೊಂದು ಚುನಾವಣೆಯಲ್ಲೂ ನಾನೇ ಬಂದು ಪ್ರಚಾರ ಮಾಡಬೇಕಾದ ಸ್ಥಿತಿ ಇದೆ ಎಂದಾದರೆ, ಇಲ್ಲಿ ನಿಮ್ಮ ಯೋಗ್ಯತೆ ಏನೆನ್ನುವುದು ಅರ್ಥವಾಗುತ್ತದೆ ಎಂದು ಅವರು ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ವಿವಿಧ ವಾರ್ಡ್‌ಗಳಿಗೆ ಭೇಟಿಯಿತ್ತು, ಮತ್ತೆ ಹೆಲಿಕ್ಯಾಪ್ಟರ್ ಏರಿದರು.
ಮನೆ ಮನೆಗೆ ತೆರಳಿ ಲಿಂಗಪ್ಪ ಪ್ರಚಾರ
ರಾಮನಗರ: ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು 8ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಮುತ್ತುರಾಜ್ ಪರ ರಾಘವೇಂದ್ರ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಕಳೆದ 5 ವರ್ಷದಿಂದ ಅಧಿಕಾರಲ್ಲಿದ್ದ ಜೆಡಿಎಸ್ ಲೂಟಿ ಮಾಡುವುದರಲ್ಲೇ ಕಾಲಹರಣ ಮಾಡಿತೇ ಹೊರತು ನಗರದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತಮ ಪುರಸಭೆ ಎಂದು ಪ್ರಶಸ್ತಿ ಪಡೆದಿದ್ದ ರಾಮನಗರವನ್ನು ಜೆಡಿಎಸ್ ದಿವಾಳಿ ಅಂಚಿಗೆ ದೂಡಿದೆ ಎಂದರು. ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ವಿಫಲವಾಗಿದೆ. ಕಳೆದ 5 ವರ್ಷದಿಂದ ಒಂದೇ ಒಂದು ನಿವೇಶನ ನೀಡಲಿಲ್ಲ. ನಗರದ ನೈರ್ಮಲ್ಯಕ್ಕೆ ಆದ್ಯತೆ ನೀಡಿಲ್ಲ. ಈ ಎಲ್ಲಾ ಸಮಸ್ಯೆಗಳ ನಿವಾರಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗಿದೆ. ಬಂದ ಅನುದಾನವನ್ನು ಬಳಸಿಕೊಂಡು ಲೆಕ್ಕಪತ್ರಗಳನ್ನು ಒಪ್ಪಿಸಿದ್ದರೆ ಇನ್ನೂ ಹೆಚ್ಚಿನ ಅನುದಾನ ಬರುತ್ತಿತ್ತು. ರು.24 ಕೋಟಿ ಪೈಕಿ ಕೇವಲ ರು.14 ಕೋಟಿಯನ್ನು ಮಾತ್ರ ಬಳಕೆ ಮಾಡಿಕೊಂಡಿತು. ಇದರಿಂದ 5 ವರ್ಷಗಳಲ್ಲಿ ರು.70 ಕೋಟಿ ಅನುದಾನ ಖೋತಾ ಆಯಿತು ಎಂದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಜನತೆ ತಿರುಗಿ ಬಿದ್ದಿದ್ದಾರೆ. ಜೆಡಿಎಸ್ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಜನತೆ ಕಾಂಗ್ರೆಸ್ ಪರ ನಿಲವು ತಳೆದಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಈ ಸಂದರ್ಭದಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದರೆ ನಗರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದ್ದರಿಂದ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.