ಯಾದವರನ್ನು ಕಡೆಗಣಿಸಿದರೆ ಕಾಂಗ್ರೆಸ್ ತಕ್ಕ ಬೆಲೆ ತೆರಬೇಕಾದೀತು: ಎ.ಕೃಷ್ಣಪ್ಪ
ಕೃಷ್ಣರಾಜಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾದವ ಜನಾಂಗದವರನ್ನು ರಾಜಕೀಯವಾಗಿ ಕಡೆಗಣಿಸಿದರೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಯಾದವ ಸಂಘದ ಗೌರವಾಧ್ಯಕ್ಷ ಹಾಗೂ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಎ.ಕೃಷ್ಣಪ್ಪ ಪಕ್ಷಕ್ಕೆ ಎಚ್ಚರಿಕೆ ನೀಡಿದರು.
ಕ್ಷೇತ್ರದ ಅಯ್ಯಪ್ಪನಗರದಲ್ಲಿರುವ ಎಸ್ಇಎ ಶಿಕ್ಷಣ ಸಂಸ್ಥೆ ಆವರಣದಲ್ಲಿ ರಾಜ್ಯ ಯಾದವರ ಸಂಘ, ನೌಕರರ ಸಂಘ, ವಿಶ್ವ ವಿದ್ಯಾಲಯಗಳ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಂಘ, ಶಿಕ್ಷಕರ ಸಂಘ, ಪಧವೀಧರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯಾದವ ಬೃಹತ್ ಸಮಾವೇಶದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಯಾದವ ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಹಲವು ರಂಗಗಳಲ್ಲಿ ಹಿಂದುಳಿದಿದ್ದು ಸಮುದಾಯದ ಅಭಿವೃದ್ಧಿಗೆ ರಾಜಕೀಯ ಅಭಿವೃದ್ಧಿ ಹೊಂದುವುದು ಅಗತ್ಯವಾಗಿದೆ ಎಂದರು. ಆದ್ದರಿಂದ ಕಾಂಗ್ರೆಸ್ ಪಕ್ಷ ಯಾದವ ಸಮುದಾಯಕ್ಕೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ 10 ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದರು.
ಕ್ಷೇತ್ರ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ಇತ್ತೀಚೆಗೆ ಕೆಲವರು ಜಾತಿ ಬಲ ಮತ್ತು ಹಣ ಬಲದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬೇರೆಯವರಿಗೆ ನೀಡದೆ ತಮಗೆ ಟಿಕೆಟ್ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಅಧಿಕಾರವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಂದ ಕ್ಷೇತ್ರದ ಜನತೆ ಆರ್ಶೀವದಿಸಲಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿತ್ರದುರ್ಗದ ಕೃಷ್ಣಯಾದವ ಸಂಸ್ಥಾನದ ಕೃಷ್ಣಯಾದವನಂದ ಸ್ವಾಮಿಜಿ ವಹಿಸಿ ನೆರದಿದ್ದ ಯಾದವ ಸಮುದಾಯದ ಜನರಿಗೆ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಯಾದವ ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀಪತಿ ಯಾದವ್, ಮಾಜಿ ಶಾಸಕ ಸೂರಂ ರಾಮಯ್ಯ, ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್, ಯಾದವ ಸಮಾಜದ ಮುಖಂಡರಾದ ಡಿ.ಕೆ.ಮೋಹನ್ಬಾಬು,ಡಿ.ಟಿ. ಶ್ರೀನಿವಾಸ್, ಎಮ್.ಕೆ.ಗೋಪಾಲ್ ಮತ್ತಿತರರು ಹಾಜರಿದ್ದರು.