ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಖಾಸಗಿ ವಿಶ್ವ ವಿದ್ಯಾಲಯ ಆರಂಭಕ್ಕೆ ವಿರೋಧ

Rashmi Kasaragodu
Updated On : 5 Mar 2013, 12:22 pm

ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮಾ.4
22 ಖಾಸಗಿ ವಿಶ್ವ ವಿದ್ಯಾಲಯವನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಶಿಕ್ಷಣ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಖಾಸಗಿ ವಿಶ್ವ ವಿದ್ಯಾಲಯ ವಿಧೇಯಕವನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ನೀಡಿದೆ. ಆ ಮೂಲಕ ಖಾಸಗಿ ವಿವಿಗಳು ನಡೆಸುವ ಶೈಕ್ಷಣಿಕ ವ್ಯಾಪಾರಕ್ಕೆ ಸರ್ಕಾರ ಸಹಕಾರ ನೀಡಿದಂತಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಆತಂಕ: ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡದೆ ಬೆಂಗಳೂರು ನಗರ ಒಂದರಲ್ಲೇ 22 ಖಾಸಗಿ ವಿವಿಗಳಿಗೆ ಅನುಮತಿ ನೀಡಿರುವ ಬಿಜೆಪಿ ಸರ್ಕಾರದ ನಡೆ ಅನುಮಾನಾಸ್ಪದವಾಗಿದ್ದು, ಇದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.  ವಿಶ್ವ ವಿದ್ಯಾಲಯಗಳು ಭ್ರಷ್ಟಾಚಾರದ ಕೂಪವಾಗಿದ್ದು, ಕುಲಪತಿಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ.
ರಾಜಭವನದಲ್ಲೇ ಕೋಟ್ಯಂತರ ರು.ಗಳ ವ್ಯವಹಾರ ನಡೆಯುತ್ತಿದೆ. ರಾಜ್ಯದ ಒಬ್ಬ ಪ್ರತಿಭಾವಂತ, ಶಿಕ್ಷಣತಜ್ಞ ಹಾಗೂ ಪ್ರಾಮಾಣಿಕ ವ್ಯಕ್ತಿ ಕುಲಪತಿಯಾಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟ ಕುಲಪತಿಗಳನ್ನು ರಾಜ್ಯಪಾಲರೇ ರಕ್ಷಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಸಾಕ್ಷಿಗಳಿವೆ ಎಂದರು.   ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳು ತನಿಖೆಗೆ ಆದೇಶಿಸಬೇಕು. ಮಹಿಳಾ ವಿವಿಯ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕು. ರಾಜೀವ್ಗಾಂಧಿ ಆರೋಗ್ಯ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ಪ್ರಭಾಕರನ್ ಕುರಿತಂತೆ ಸಿಬಿಐನ ತನಿಖಾ ವರದಿಯನ್ನು ಬಹಿರಂಗಪಡಸಿಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಂಚಾಲಕ ಸುನಿಲ್‌ಣಕುಮಾರ್, ಪ್ರಮುಖರಾದ ವಿಜಯ್‌ಕುಮಾರ್, ಅನಿಲ್‌ಬಾಬು, ಕಾವ್ಯಶ್ರೀ, ಶೃತಿ, ರೋಜಾ, ಶ್ವೇತಾ, ಸುಮಾ ಮತ್ತಿತರರು ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement