ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಗರಸಭೆ ಅಭ್ಯರ್ಥಿಗಳ ಅಬ್ಬರದ ಪ್ರಚಾರ

Rashmi Kasaragodu
Updated On : 5 Mar 2013, 12:24 pm

ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ  ಮಾ. 4
ದೊಡ್ಡಬಳ್ಳಾಪುರ ನಗರಸಭೆಯ ಎಲ್ಲ 31 ಸ್ಥಾನಗಳಿಗೆ ಮಾ.7ರಂದು ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳ ಪ್ರಚಾರದ ಭರಾಟೆ ಮುಗಿಲು ಮುಟ್ಟಿದ್ದು, ಎಲ್ಲೆಡೆ ಅಬ್ಬರದ ಮತಯಾಚನೆ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳೂ ಬೀದಿ ಬೀದಿಯಲ್ಲಿ ಮತಯಾಚನೆಯ ಮ್ಯಾರಥಾನ್ ನಡೆಸುತ್ತಿದ್ದಾರೆ. ಕೆಲ ಸ್ಟಾರ್ ಪ್ರಚಾರಕರೂ ಬಂದು ಪ್ರಚಾರ ಮಾಡಿ ಹೋಗಿದ್ದಾಗಿದೆ.
ಅಭ್ಯರ್ಥಿಗಳು ಪರ ಈ ಬಾರಿ ಕಾರ್ಯಕರ್ತರು ತಂಡೋಪತಂಡವಾಗಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವುದು ವಿಶೇಷವಾಗಿದೆ. ನೂರಾರು ಸಂಖ್ಯೆಯ ಕಾರ್ಯಕರ್ತರಿಂದ ಪ್ರತಿದಿನ ದುಡಿಸಿಕೊಳ್ಳುತ್ತಿರುವ ಕೆಲ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅವರ ನಿರ್ವಹಣೆಗೆ ಎಷ್ಟು ಖರ್ಚು ಮಾಡುತ್ತಿರಬಹುದು ಎಂಬುದು ದೊಡ್ಡ ಲೆಕ್ಕಾಚಾರ. ಚುನಾವಣಾ ಲೆಕ್ಕಪತ್ರಗಳ ಪರಿಶೀಲನೆಯ ವೇಳೆ ಚುನಾವಣಾಧಿಕಾರಿಗಳು ಈ ಅಂಶಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕೇವಲ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲದೆ ಪಕ್ಷೇತರ ಅಭ್ಯರ್ಥಿಗಳ ಹಿಂದೆಯೂ ನೂರಾರು ಸಂಖ್ಯೆಯ ಕಾರ್ಯಕರ್ತರ ಪಡೆ ಮತಬೇಟೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಈ ಕಾರ್ಯಕರ್ತರ ಪಡೆಯಲ್ಲಿರುವಷ್ಟು ಜನ ನಿಷ್ಠಾವಂತಿಕೆಯಿಂದ ತಾವು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗೇ ಮತ ಹಾಕಿಬಿಟ್ಟರೆ ಎಷ್ಟೋ ಅಭ್ಯರ್ಥಿಗಳ ಹಣೆಬರೆಹ ನಿರ್ಧಾರವಾಗಿಬಿಡಬಹುದು. ಈ ಬಾರಿಯ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿರುವುದಂತೂ ನಿಜ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ದಿನಕ್ಕೆ ಕನಿಷ್ಠ 300 ರು. ಜೊತೆಗೆ ಊಟ-ಉಪಚಾರ ಎಗ್ಗಿಲ್ಲದೆ ದೊರೆಯುತ್ತಿದೆ.
ಇಂದು ತೆರೆ: ಚುನಾವಣಾ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಬೆಳಗ್ಗೆ ತೆರೆ ಬೀಳಲಿದೆ. ಇನ್ನೇನಿದ್ದರೂ ಅಭ್ಯರ್ಥಿಗಳು ತೆರೆಮರೆ ಕಸರತ್ತಿಗೆ ಒತ್ತು ನೀಡಲು ಕ್ಷಣಗಣನೆ ಆರಂಭವಾಗಿದೆ. ಬಹಿರಂಗಸಭೆ, ಮೆರವಣಿಗೆಗಳಿಗೆ ಮಂಗಳವಾರ ಬೆಳಗ್ಗೆಯ ನಂತರ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ವೈಯಕ್ತಿಕವಾಗಿ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಳ್ಳಬಹುದು. ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿ ಮತದಾರರಲ್ಲದವರು ಪ್ರವೇಶಿಸುವಂತಿಲ್ಲ. ಪ್ರಚಾರಕ್ಕೆ ಆಗಮಿಸಿದ್ದ ಹೊರಗಿನ ಜನ ಜಾಗ ಖಾಲಿ ಮಾಡಬೇಕಿದೆ.
ಅಬ್ಬರದ ಪ್ರಚಾರ: ಈಗಾಗಲೇ 31 ವಾರ್ಡುಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳೆನಿಸಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ, ಕೆಜೆಪಿ ಪರ ಅಬ್ಬರದ ಪ್ರಚಾರ ನಡೆದಿದೆ. ಕನ್ನಡ ಪಕ್ಷ ಮತ್ತು ಸಿಪಿಐ(ಎಂ) ಕೂಡ ತಾವು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆಯಲ್ಲಿ ತೊಡಗಿವೆ. ಕೆಲ ಪಕ್ಷೇತರರು ಇಂದಿನ ರಾಜಕಾರಣದ ಒಡಕಿನ ಲಾಭ ಪಡೆದು ಅದ್ದೂರಿ ಪ್ರಚಾರದತ್ತ ಮುಖ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement