ಮೈಸುಡುವ ಬಿಸಿಲಲ್ಲೂ ಪಕ್ಷಗಳ ಮತ ಬೇಟೆ
ಕ.ಪ್ರ. ವಾರ್ತೆ ಟಿ ಚನ್ನಪಟ್ಟಣ ಟಿ ಮಾ. 4
ತಾಲೂಕಿನ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವೆನಿಸಿರುವ ಮಿನಿಮಹಾ ಸಮರ ಸನಿಹವಾಗುತ್ತಿರುವಂತೆಯೇ ತಾಲೂಕು ರಾಜಕೀಯ ಪಾಳಯ ಬಿರುಸುಗೊಂಡಿದ್ದು, ಮೈಸುಡುವ ಬಿಸಿಲಿನಲ್ಲೂ ರಾಜಕೀಯ ಪಕ್ಷಗಳ ಮತಭೇಟೆ ಬಿರುಸಿನಿಂದ ಸಾಗಿದೆ. ಸೋಮುವಾರ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಮತದಾರನ ಮನಗೆಲ್ಲಲು ಬೀದಿಗಿಳಿದ ಪರಿಣಾಮ ಚುನಾವಣಾ ಕಾವು ಬಿಸಿಲ ಜಳವನ್ನೂ ಮೀರಿಸಿತ್ತು.
ತಾರಾಮೆರುಗು: ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಚಿತ್ರನಟ ಟೆನ್ನಿಸ್ ಕೃಷ್ಣ ಪ್ರಚಾರ ನಡೆಸುವ ಮೂಲಕ ಪ್ರಚಾರಕಣಕ್ಕೆ ತಾರಾಮೆರುಗು ನೀಡಿದರು.
ಪಟ್ಟಣದ 9ರಿಂದ 17 ನೇ ವಾರ್ಡ್ ವರೆಗೆ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ನಗರಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ನಿಂದ ಎರಡೆರಡು ಪ್ರಚಾರ: ತಾಲೂಕು ಕಾಂಗ್ರೆಸ್ ಮತ್ತು ಪಕ್ಷಕ್ಕೆ ಮತ್ತೆ ಮರಳಿರುವ ಮಾಜಿ ಸಚಿವ ಯೋಗೇಶ್ವರ್ ಪ್ರತ್ಯೇಕವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಯೋಗೇಶ್ವರ್ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಕೋಟೆ ಮತ್ತು ಮಂಗಳವಾರ ಪೇಟೆ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರೆ, ಇತ್ತ ರಘುನಂದನ್ ರಾಮಣ್ಣ ಮತ್ತು ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು 7 ಮತ್ತು 8 ನೇವಾರ್ಡ್ ನಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಇದರೊಂದಿಗೆ ಯೋಗೇಶ್ವರ್ ಮತ್ತು ಮೂಲ ಕಾಂಗ್ರೆಸ್ಸಿಗರ ನಡುವೆ ಹೊಂದಾಣಿಕೆ ಇಲ್ಲ ಎಂಬ ಸಂಗತಿ ಮತ್ತೆ ದೃಢಪಟ್ಟಿದೆಯಾದರೂ ಇದನ್ನು ಎರಡೂ ಬಣದ ಮುಖಂಡರು ಒಪ್ಪುತ್ತಿಲ್ಲ.
ಅನಿತಾ ಪ್ರಚಾರ: ಜೆಡಿಎಸ್ ಅಭ್ಯರ್ಥಿಗಳ ಗೆಲವಿಗೆ ಟೊಂಕ ಕಟ್ಟಿ ನಿಂತಿರುವ ವಿಧಾನ ಸಭಾಚುನಾವಣೆಯ ಸಂಭವನೀಯ ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಸೋಮುವಾರ ಸಂಜೆ ಪಟ್ಟಣದ ಕೆಲವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಯೋಗೇಶ್ವರ್ ದುರಾಡಳಿತದಿಂದಾಗಿ ನಗರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು ನಗರಸಭೆ ಚುನಾವಣೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದರೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಮತರದಾರರಿಗೆ ಭರವಸೆ ನೀಡಿದರು.
ಇತರ ಪಕ್ಷಗಳು ಚುರುಕು: ಕಾಂಗ್ರೆಸ್- ಜೆಡಿಎಸ್ ಜತೆಗೆ ನಗರಸಭೆ ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ, ಬಿಎಸ್ಸಾರ್ ಹಾಗೂ ಪಕ್ಷೇತರರು ಮತದಾರರ ಮನಗೆಲ್ಲಲು ಬಿರುಸಿನ ಪ್ರಚಾರ ನಡೆಸಿದರು. ಮತದಾರರ ಮನೆಮನೆಗೆ ತೆರಳಿ ತಮಗೇ ಮತನೀಡುವಂತೆ ಪುಸಲಾಯಿಸುತ್ತಿದ್ದು ಕಂಡು ಬಂತು. ಕೆಲವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಬಂಡಾಯ ಪಕ್ಷದ ಅಭ್ಯರ್ಥಿಗಳಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದಾರೆ.