ಗಾಳಿಗೆ ನೀತಿ ಸಂಹಿತೆ; ಜಿಲ್ಲಾಡಳಿತ ಕಣ್ಮುಚ್ಚಿತೆ?
ಮತ್ತೀಕೆರೆ ಜಯರಾಮ್
ಕನ್ನಡಪ್ರಭ ವಾರ್ತೆ ರಾಮನಗರ ಮಾ.5 ರಾಜ್ಯಾದ್ಯಂತ ಪೌರ ಸಂಸ್ಥೆಗಳ ಚುನಾವಣೆಗೆ ಸೋಮವಾರವೇ ತೆರೆ ಬಿದ್ದಿದೆ. ಆದರೆ, ರಾಮನಗರ ಜಿಲ್ಲೆಯಲ್ಲಿ ಮಂಗಳವಾರವೂ ರಾಜಕಾರಣಿಗಳು ದಂಡು ಕಟ್ಟಿಕೊಂಡು ಪ್ರಚಾರ ನಡೆಸಿ, ಮಾದರಿ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ. ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
ಚುನಾವಣೆಗೆ 48 ತಾಸು ಮುನ್ನ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಆಯಾ ಪೌರ ಸಂಸ್ಥೆ ವ್ಯಾಪ್ತಿಯ ಮತದಾರರಲ್ಲದ ರಾಜಕಾರಣಿಗಳು, ಸ್ಟಾರ್ ಪ್ರಚಾರಕರು, ಅಭ್ಯರ್ಥಿ ಬೆಂಬಲಿಗರು ಮತಯಾಚನೆಯಲ್ಲಿ
ತೊಡಗುವಂತಿಲ್ಲ. ಅಂತೆಯೇ ಅವರೆಲ್ಲ ಪೌರ ಸಂಸ್ಥೆ ವ್ಯಾಪ್ತಿ ಬಿಟ್ಟು ಹೊರ ನಡೆಯಬೇಕೆಂದು ಸೋಮವಾರ ಸಂಜೆಯೇ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಆದೇಶಿಸಿದ್ದರು. ಅದಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.
ಪ್ರಮುಖರಿಂದ ಉಲ್ಲಂಘನೆ: ಇಷ್ಟಾಗಿಯೂ ರಾಮನಗರ ಜಿಲ್ಲೆಯ ವಿವಿಧೆಡೆ ಪೌರ ಸಂಸ್ಥೆ ವ್ಯಾಪ್ತಿಯ ಮತದಾರರಲ್ಲದವರು, ರಾಜಕೀಯ ಪ್ರಮುಖರು ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ದಂಡು ಸಮೇತ ಪ್ರಚಾರದಲ್ಲಿ ಮಂಗಳವಾರವೂ ನಿರತರಾಗುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಪೈಕಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ ಪ್ರಮುಖರು.
ಯೋಗೇಶ್ವರ್ ಚನ್ನಪಟ್ಟಣದ 22, 23, 24ನೇ ವಾರ್ಡ್ಗಳಿಗೆ ಸೇರಿದ ಶೇರ್ವ ಹೋಟೆಲ್, ಸಯ್ಯದ್ವಾಡಿ, ಮದೀನಾ ಚೌಕ, ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು. ಪ್ರಚಾರ ಅಂತ್ಯದ ಬಳಿಕ ಪಕ್ಷದ ಚಿಹ್ನೆ, ಬಾವುಟ ಹಿಡಿಯುವುದೂ ನಿಷೇಧ. ಇಷ್ಟಾಗಿಯೂ ಯೋಗೇಶ್ವರ್ ಸ್ವತಃ ಚಾಲನೆ ಮಾಡಿದ ಜೀಪ್ನಲ್ಲಿದ್ದವರು ಕಾಂಗ್ರೆಸ್ ಚಿಹ್ನೆಯುಳ್ಳ ಟೋಪಿ, ಟವಲ್ ಸುತ್ತಿಕೊಂಡಿದ್ದರು.
ವಿವಿಧ ವಾರ್ಡ್ಗಳಲ್ಲಿ ಮತಯಾಚನೆ: ಅತ್ತ ಮಾಗಡಿಯಲ್ಲಿ ಶಾಸಕ ಬಾಲಕೃಷ ಜೆಡಿಎಸ್ ಅಭ್ಯರ್ಥಿಗಳೊಟ್ಟಿಗೆ ವಿವಿಧ ವಾರ್ಡ್ಗಳಲ್ಲಿ ಮತಯಾಚನೆ ನಡೆಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಅಧ್ಯಕ್ಷ ದೇವೇಗೌಡ, ಚನ್ನಪಟ್ಟಣದಲ್ಲಿ ವಡ್ಡರಹಳ್ಳಿ ರಾಜಣ ಕೂಡ ಮತಯಾಚಿಸಿದ್ದಾರೆ. ಪೌರ ಸಂಸ್ಥೆಗಳ ವ್ಯಾಪ್ತಿಯ ಅಜ್ಞಾತ ಸ್ಥಳಗಳಿಂದಲೇ ಪಾರ್ಟಿ ಫಂಡ್ ವಿತರಣೆಯೂ ನಡೆದಿದೆ.
ಇಬ್ಬರೂ ಮತದಾರರಲ್ಲ: ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಯೋಗೇಶ್ವರ್ ಮತ್ತು ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಬಾಲಕೃಷ ಮತದಾರರಲ್ಲ. ಯೋಗೇಶ್ವರ್ ಮತದಾನದ ಹಕ್ಕು ಸ್ವಗ್ರಾಮ ಚಕ್ಕೆರೆಯ ಭಾಗ ಸಂಖ್ಯೆ 153ರ ಕ್ರಮ ಸಂಖ್ಯೆ 451ರಲ್ಲಿದೆ. ಬಾಲಕೃಷ ಅವರ ಮತ ಮಾಗಡಿ ತಾಲೂಕಿನ ಹುಲಿಕಟ್ಟೆಯ ಭಾಗ ಸಂಖ್ಯೆ 168ರ ಕ್ರಮ ಸಂಖ್ಯೆ 47 ರಲ್ಲಿದೆ.
ಪೌರ ಸಂಸ್ಥೆ ವ್ಯಾಪ್ತಿಯ ಮತದಾರರಲ್ಲದವರು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ರಾಜಕೀಯ ಚಟುವಟಿಕೆ ಮತ್ತು ಪ್ರಚಾರದಲ್ಲಿ ತೊಡಗುವುದು ನೀತಿ ಸಂಹಿತೆಯ ಉಲ್ಲಂಘನೆಯ ಸ್ಪಷ್ಟ ಪ್ರಕರಣವಾಗುತ್ತದೆ. ಆದರೆ, ಇಲ್ಲಿ ಪ್ರಕರಣ ದಾಖಲಿಸುವ ಧೈರ್ಯ ಅಧಿಕಾರಿಗಳಿಗೆ ಇಲ್ಲ. ಇದೆಲ್ಲವನ್ನೂ ಗಮನಿಸಿದರೆ, ಪ್ರಸಕ್ತ ಚುನಾವಣೆಯನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲವೋ, ರಾಜಕಾರಣಿಗಳ ಮರ್ಜಿಯಲ್ಲಿ ನಡೆಸುತ್ತಿದ್ದಾರೋ ಎನ್ನುವ ಅನುಮಾನ ಸಹಜವಾಗಿಯೇ ಕಾಡುತ್ತದೆ.
ಬಹಿರಂಗ ಪ್ರಚಾರದ ಬಳಿಕ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದು. ಮೈಕ್ ಬಳಸಿ ಪ್ರಚಾರ ನಡೆಸುವಂತಿಲ್ಲವಷ್ಟೇ. ಪ್ರಚಾರದಲ್ಲಿ ತೊಡಗಿದ್ದ ರಾಜಕಾರಣಿಗಳಿಗೆ ಅಂತ್ಯಗೊಳಿಸುವಂತೆ ಸೂಚನೆ ನೀಡಲಾಗಿದೆ. ಚನ್ನಪಟ್ಟಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಿಸಿಲ್ಲ.
ಅರುಣಪ್ರಭ, ತಹಸೀಲ್ದಾರ್
ಬಹಿರಂಗ ಪ್ರಚಾರ ಅಂತ್ಯದ ಬಳಿಕವೂ ರಾಜಕೀಯ ಮುಖಂಡರು ಅಭ್ಯರ್ಥಿಗಳೊಟ್ಟಿಗೆ ಮತಯಾಚನೆಯಲ್ಲಿ ತೊಡಗಿರುವ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ತಕ್ಷಣ ಅವರನ್ನು ಹೊರ ಕಳುಹಿಸುವಂತೆ ಆಯಾ ತಹಸೀಲ್ದಾರ್ಗಳಿಗೆ ಸೂಚಿಸಲಾಗಿದೆ.
ವಿ.ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿ
ವಾರ್ಡ್ 2ರಲ್ಲಿ ಸೀರೆ ಹಿಡಿದುಕೊಟ್ಟರು
ರಾಮನಗರದ ವಾರ್ಡ್ ನಂ.2ರಲ್ಲಿ ಸೋಮವಾರ ರಾತ್ರಿ ಅಭ್ಯರ್ಥಿಯೊಬ್ಬರ ಬೆಂಬಲಿಗರು ಹಂಚಲು ತಂದಿದ್ದ ಸುಮಾರು 2 ಸಾವಿರ ಸೀರೆಗಳನ್ನು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ವಾರ್ಡ್ನಲ್ಲಿ ಮನೆ ಮನೆಗೆ ತೆರಳಿ ಗುಂಪೊಂದು ಸೀರೆ ಹಂಚುತ್ತಿದ್ದಾಗ ಮಾಹಿತಿ ತಿಳಿದ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ತೆರಳಿದರು. ತಕ್ಷಣ ಸೀರೆ ಹಂಚುತ್ತಿದ್ದವರು ಅಲ್ಲಿಂದ ಪರಾರಿಯಾದರು. ಸೀರೆ ತುಂಬಿದ್ದ ಆಟೋ, ಮಾರುತಿ ವ್ಯಾನ್ ಹಿಡಿದು ಐಜೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇದು ಬಿಜೆಪಿಗೆ ಸೇರಿದ್ದೆಂದು ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು.
ಇಲ್ಲಿ ರಾಜಕೀಯ ಕಾರ್ಯಕರ್ತರೇ ಹಿಡಿದು, ಪೊಲೀಸರಿಗೆ ಸೀರೆ ಒಪ್ಪಿಸಿದ್ದಾರೆ. ಇದು ಪ್ರಸಕ್ತ ಚುನಾವಣೆಯಲ್ಲಿ ದಾಖಲಾದ ಮೊದಲ ನೀತಿ ಸಂಹಿತೆ ಉಲ್ಲಂಘನೆ ಮತ್ತು ಚುನಾವಣಾ ಅಕ್ರಮದ ಪ್ರಕರಣವಾಗಿದೆ.
ಜಮೀರ್ ಪ್ರಚಾರ
ಅಲ್ಪ ಸಂಖ್ಯಾತ ಮತದಾರರು ಹೆಚ್ಚು ಸಂಖ್ಯೆಯಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪರ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಪ್ರಚಾರ ನಡೆಸಿದ್ದಾರೆ. ಅವರು ಮುಸ್ಲಿಮರು ಇರುವ ವಾರ್ಡ್ಗಳಲ್ಲಿ ಸೀಮಿತವಾಗಿ ಪ್ರಚಾರ ನಡೆಸಿ, ಜೆಡಿಎಸ್ಗೆ ಮತ ನೀಡುವ ಮೂಲಕ ಕುಮಾರಸ್ವಾಮಿ ಕೈ ಬಲಪಡಿಸುವಂತೆ ಮನವಿ ಮಾಡಿದ್ದಾರೆ.
ರಾಮನಗರ ನಗರಸಭೆಯಲ್ಲಿ ಜೆಡಿಎಸ್ ಕೋಟೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸಂಪನ್ಮೂಲದ ಸಮಸ್ಯೆ ಕಾಡುತ್ತಿತ್ತು. ಅದನ್ನು ಈಗ ಮರಿದೇವರು ನೀಗಿಸಿದ್ದಾರೆ.
ಮತಗಟ್ಟೆ ಅದಲು-ಬದಲು
ರಾಮನಗರ ನಗರಸಭೆಯ 21ನೇ ವಾರ್ಡ್ಗೆ ಸೇರಿದ ಮತಗಟ್ಟೆಗಳನ್ನು ಅದಲು-ಬದಲು ಮಾಡಿ, ಜಿಲ್ಲಾಡಳಿತ ಅವಾಂತರ ಸೃಷ್ಟಿಸಿದೆ. ಈ ಎಡವಟ್ಟಿನ ಕಾರಣಕ್ಕೆ ಎರಡು ಬಡಾವಣೆಗಳ ಮತದಾರರು ತಲಾ 1 ಕಿ.ಮೀ. ದೂರ ಸಾಗಿ ಮತ ಚಲಾಯಿಸುವ ಸ್ಥಿತಿ ಎದುರಾಗಿದೆ. ಕೊತ್ತಿಪುರ ಗ್ರಾಮ ಹಲವು ಹಲವು ವರ್ಷಗಳ ಹಿಂದೆಯೇ ಪೌರ ಸಂಸ್ಥೆ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಪ್ರಸ್ತುತ 21ನೇ ವಾರ್ಡ್ಗೆ ಕೊತ್ತಿಪುರ ಗ್ರಾಮ ಮತ್ತು ಅರ್ಕೇಶ್ವರ ನಗರ ಬಡಾವಣೆ ಸೇರಿವೆ. ಕೊತ್ತಿಪುರದ ಮತದಾರರು ಅರ್ಕೇಶ್ವರ ನಗರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕಿದೆ.
ಅಂತೆಯೇ ಅರ್ಕೇಶ್ವರ ನಗರ ಬಡಾವಣೆಯ ಮತದಾರರು ತಮ್ಮ ಹಕ್ಕು ಚಲಾಯಿಸಲು ಕೊತ್ತಿಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಹೋಗಬೇಕಿದೆ. ಲೋಪ ಸರಿಪಡಿಸುವಂತೆ ಸಲ್ಲಿಸಿದ ಮನವಿಗೆ ಜಿಲ್ಲಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮತದಾರರು ಮತದಾನ ಬಹಿಷ್ಕರಿಸಲೂ ಚಿಂತನೆ ನಡೆಸಿದ್ದಾರೆ.