ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಂತಿನಗರದಲ್ಲಿ ಸೃಷ್ಟಿಯಾಯ್ತು ಅಶಾಂತಿ

Rashmi Kasaragodu
Updated On : 6 Mar 2013, 12:36 pm

ಕ.ಪ್ರ. ವಾರ್ತೆ  ದೊಡ್ಡಬಳ್ಳಾಪುರ  ಮಾ.5
ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್‌ನಲ್ಲಿರುವ ಭಿನ್ನಮತ ಸ್ಫೋಟಗೊಂಡಿದೆ. ಜೆಡಿಎಸ್ ಮುಖಂಡ ಬಿ. ಮುನೇಗೌಡ ಮತ್ತು ಮಾಜಿ ಸಚಿವ ಸಿ.ಚನ್ನಿಗಪ್ಪ ಬೆಂಬಲಿಗರ ನಡುವೆ ಘರ್ಷಣೆ-ಗಲಭೆ ನಡೆದಿದೆ.
ಇಲ್ಲಿನ ಮುತ್ಯಾಲಮ್ಮಗುಡಿ ವಾರ್ಡ್ ನಂ.31ರ ಜೆಡಿಎಸ್ ಅಭ್ಯರ್ಥಿ ಆರ್.ಗೋವಿಂದರಾಜು ಪರವಾಗಿ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದ ವೇಳೆ, ಅದೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಜಿ.ಎಸ್. ಸೋಮರುದ್ರಶರ್ಮ ಪರವಾಗಿ ಬಿ.ಮುನೇಗೌಡ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಜೆಡಿಎಸ್ ಮುಖಂಡ ಬಿ.ಮುನೇಗೌಡ ಸೋದರನಿಗೆ ಸೇರಿದ ಸ್ಕಾರ್ಪಿಯೋ ವಾಹನದ ಗಾಜು ಪುಡಿಪುಡಿಯಾಗಿದೆ. ಅಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.
ಬಿಗುವಿನ ವಾತಾವರಣ: ಘಟನೆ ನಡೆದ ಕೆಲ ಸಮಯ ವಾರ್ಡಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜೆಡಿಎಸ್‌ನ 2 ಬಣಗಳ ನಡುವೆ ಈ ಬಗೆಯ ಗೊಂದಲ ಸೃಷ್ಟಿಯಾಗಿರುವುದು ಘಟನೆ ಮೂಲಕ ಜಗಜ್ಜಾಹೀರಾಗಿದೆ. ಪಕ್ಷದಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿರುವುದಕ್ಕೆ ಘಟನೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುನೇಗೌಡ ಬೆಂಬಲಿಗರು ಮತ್ತು ಗೋವಿಂದರಾಜು ಬೆಂಬಲಿಗರು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಡಿವೈಎಸ್ಪಿ ಶ್ರೀಧರ್, ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಶಾಂತಿನಗರದಲ್ಲಿ ಪ್ರಸ್ತುತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮೋಸ ಹೋದವರ ಪರ ಪ್ರಚಾರ: ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಜೆಡಿಎಸ್ ಖಜಾಂಚಿ ಬಿ.ಮುನೇಗೌಡ, ಜೆಡಿಎಸ್‌ನಿಂದ ಟಿಕೆಟ್ ನಿರೀಕ್ಷೆ ಇಟ್ಟುಕೊಂಡು ಮೋಸ ಹೋಗಿದ್ದವರ ಪರ ನಾವು ಪ್ರಚಾರ ಮಾಡುತ್ತಿದ್ದೇವೆಯೇ ಹೊರತು, ಜೆಡಿಎಸ್ ವಿರುದ್ಧ ಅಲ್ಲ. ಪಕ್ಷವನ್ನು ಕಳೆದ 4 ವರ್ಷಗಳಿಂದ ಗ್ರಾಮ ಮಟ್ಟದಿಂದಲೂ ಸಂಘಟಿಸಿಕೊಂಡು ಬಂದಿದ್ದೇನೆ. ಆದರೆ ಇತ್ತೀಚೆಗೆ ರಾಜಕೀಯವನ್ನು ವ್ಯವಹಾರೀಕರಣ ಮಾಡಲು ಬಂದಿರುವ ಕೆಲವರು ಜೆಡಿಎಸ್‌ನಲ್ಲಿ ಬಿರುಕು ಉಂಟುಮಾಡುತ್ತಿದ್ದಾರೆ. ನಾನು ಬೆಳೆಸಿದ ವರ್ಚಸ್ಸನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ. ಕೇವಲ ವೈಯಕ್ತಿಕ ದ್ವೇಷ ಮತ್ತು ಸ್ವಾರ್ಥ ರಾಜಕಾರಣದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಪಕ್ಷವಿರೋಧಿ ಚಟುವಟಿಕೆ: ಘಟನೆಗೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ತಾ.ಅಧ್ಯಕ್ಷ, 31ನೇ ವಾರ್ಡಿನ ಅಭ್ಯರ್ಥಿ ಆರ್.ಗೋವಿಂದರಾಜು, ಬಿ.ಮುನೇಗೌಡ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಗರಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ದೂರ ಇಟ್ಟಿರುವ ಕೆಲವರಿಗೆ ಪ್ರಚೋದನೆ ನೀಡುವ ಮೂಲಕ ಪಕ್ಷವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಈ ರೀತಿ ಹಿಂಬಾಗಿಲ ರಾಜಕಾರಣ ಮಾಡುತ್ತಿರುವ ಅವರ ಎಲ್ಲ ಚಟುವಟಿಕೆಗಳ ಬಗ್ಗೆ ಜೆಡಿಎಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಈ ತಿಂಗಳ 10ರೊಳಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement