ಕಡಿಮೆ ಸಂಭಾವನೆ: ಮತಗಟ್ಟೆ ಅಧಿಕಾರಿಗಳ ಆಕ್ರೋಶ
ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಮಾ.6
ರಾಜ್ಯ ಚುನಾವಣಾ ಆಯೋಗ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಡಿಮೆ ಸಂಭಾವನೆ ನೀಡುತ್ತಿದೆ. ಆಯೋಗದ ಈ ವರ್ತನೆ ಸರಿಯಲ್ಲ ಎಂದು ಮತಗಟ್ಟೆಗಳಿಗೆ ತೆರಳುವ ಅಧಿಕಾರಗಳು ಬುಧವಾರ ಮಧ್ಯಾಹ್ನ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ತೀವ್ರ ಕೋಪ ತಾಪ ವ್ಯಕ್ತಪಡಿಸಿದ ಶಿಕ್ಷಕ ಮುಖಂಡ ರಾಜಣ, ಚುನಾವಣಾ ಪ್ರಕ್ರಿಯೆಗಳು ಸೂಸೂತ್ರವಾಗಿ ನಡೆಯಲು ಚುನಾವಣಾ ಸಿಬ್ಬಂದಿ ಮೂಲ ಕಾರಣ. ಆದರೆ ಆಯೋಗ ಅವರಿಗೇ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.
ಆಯೋಗದ ಆದೇಶದಂತೆ ಕ್ರಮ: ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಆಯೋಗದ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಚುನಾವಣಾ ಆಯೋಗ ನಡೆಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ನಿಗದಿಪಡಿಸಿರುವ ದರದನ್ವಯ ಚುನಾವಣೆಗೆ ನೇಮಿಸಲ್ಪಡುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಹಾಗೂ ಎಣಿಕೆ ಮೇಲ್ವಿಚಾರಕರಿಗೆ ಸಂಭಾವನೆ ಪಾವತಿಸಲಾಗುತ್ತಿದೆ. ಮತಗಟ್ಟೆ ಅಧಿಕಾರಿಗೆ 1 ದಿನದ ತರಬೇತಿಗೆ ರು.250, ಮಾಸ್ಕರಿಂಗ್ ದಿನ ರು.250, ಮತದಾನದ ದಿನ ರು.250 ಮತ್ತು ಉಪಹಾರಕ್ಕೆ ರು.100 ಸೇರಿದಂತೆ ಒಟ್ಟು 850 ರುಗಳನ್ನು ನಿಗಧಿಪಡಿಸಲಾಗಿದೆ. ಅದೇ ರೀತಿ 1ನೇ ಮತಗಟ್ಟೆ ಅಧಿಕಾರಿಗೆ ರು.625, 2 ಮತ್ತು 3ನೇ ಮತಗಟ್ಟೆ ಅಧಿಕಾರಿಗೆ ರು.450, ಗ್ರೂಪ್ ಡಿ ಸಿಬ್ಬಂದಿಗೆ ರು.300, ಮತದಾರರನ್ನು ಗುರುತಿಸುವ ಅಧಿಕಾರಿಗೆ ರು.50 ನಿಗಧಿ ಮಾಡಲಾಗಿದೆ. ಇದು ತಾಲೂಕುವಾರು ಅಥವಾ ಜಿಲ್ಲಾವಾರು ಬದಲಾಯಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.